ಹೊಸದಿಲ್ಲಿ: ಭಾನುವಾರ ರಾತ್ರಿ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ನಡೆದ ಕ್ರೂರ ಹಿಂಸಾಚಾರವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ 26/11 ಮುಂಬಯಿ ದಾಳಿಗೆ ಹೋಲಿಸಿದ್ದಾರೆ. ಜೊತೆಗೆ ಕಬ್ಬಿಣದ ರಾಡ್, ಸುತ್ತಿಗೆ, ಬಡಿಗೆಗಳಿಂದ ಮುಸುಕುಹಾಕಿಕೊಂಡು ದಾಳಿ ನಡೆಸಿದವರನ್ನು ಅವರು ಹೇಡಿಗಳು ಎಂದು ಕರೆದಿದ್ದಾರೆ. “ನಾನು ಟಿವಿಯಲ್ಲಿ ವರದಿಗಳನ್ನು ನೋಡುತ್ತಿದ್ದೆ. ಭಾನುವಾರ ರಾತ್ರಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ನೋಡಿದಾಗ ನನಗೆ 26/11 ಮುಂಬೈ ದಾಳಿಯ ನೆನಪಾಯಿತು. ದೇಶದಲ್ಲಿ ವಿದ್ಯಾರ್ಥಿಗಳು ಅಸುರಕ್ಷತೆಯ ಭಾವ ಎದುರಿಸುತ್ತಿದ್ದಾರೆ… ಮಹಾರಾಷ್ಟ್ರದಲ್ಲಿ ಈ ರೀತಿಯ ಘಟನೆ ನಡೆದರೆ ನಾನು ಸಹಿಸುವುದಿಲ್ಲ,” ಎಂಬುದಾಗಿ ಉದ್ಧವ್ ಠಾಕ್ರೆ ಗುಡುಗಿದ್ದಾರೆ. “ಯುವಕರು ಭಯಪಟ್ಟಿದ್ದಾರೆ ಮತ್ತು ಆಕ್ರೋಶಿತರಾಗಿದ್ದಾರೆ. ನಮ್ಮ ಯುವಕರು ಹೇಡಿಗಳಲ್ಲ. ಯುವಕರನ್ನು ರೊಚ್ಚಿಗೆಬ್ಬಿಸಿ ಬಾಂಬ್ ಹೊತ್ತಿಸಬೇಡಿ. ಒಂದೊಮ್ಮೆ ದೆಹಲಿ ಪೊಲೀಸರು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ವಿಫಲವಾಗಿದ್ದೇ ಆದಲ್ಲಿ ಅವರು ಕೂಡ ಇದಲ್ಲಿ ಪಾಲ್ಗೊಂಡಿದ್ದಾರೆಂದೇ ಅರ್ಥ,” ಎಂದು ಅವರು ಹರಿಹಾಯ್ದಿದ್ದಾರೆ.
“ಈ ಮುಸುಕಿನ ಹಿಂದಿರುವವರು ಯಾರು ಎಂಬುದನ್ನು ನಾವು ತಿಳಿಯಬೇಕಾಗಿದೆ. ಮುಸುಕು ಹಾಕಿ ಬಂದವರು ಹೇಡಿಗಳು. ಧೈರ್ಯವಿದ್ದರೆ ಅವರು ಬಹಿರಂಗವಾಗಿ ಬರಬೇಕಿತ್ತು. ಇಂಥ ಹೇಡಿಗಳನ್ನು ಸಹಿಸಲು ಸಾಧ್ಯವಿಲ್ಲ,” ಎಂಬುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಕಿಡಿಕಾರಿದ್ದಾರೆ. ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಈ ದಾಳಿಗಳನ್ನು ನಡೆಸಿದೆ ಎಂಬ ಆರೋಪಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಠಾಕ್ರೆ, “ನಾನು ಈ ವಿಚಾರದಲ್ಲಿ ರಾಜಕಾರಣ ಮಾಡಲು ಇಚ್ಛಿಸುವುದಿಲ್ಲ. ಆದರೆ ದುಷ್ಕರ್ಮಿಗಳ ಮುಸುಕನ್ನು ತೆಗೆಯಬೇಕು, ಇದರಿಂದ ಇದರ ಹಿಂದಿರುವವರು ಯಾರು ಎಂಬ ಸ್ಪಷ್ಟ ಚಿತ್ರಣ ನಮಗೆ ಸಿಗುತ್ತದೆ,” ಎಂದಿದ್ದಾರೆ.
ಭಾನುವಾರ ರಾತ್ರಿ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಜೆಎನ್‌ಯುನ 34 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಗಾಯಗೊಂಡಿದ್ದಾರೆ.
from India & World News in Kannada | VK Polls https://ift.tt/2MZbnYp