ಜಾತಿ ಗಣತಿ ವರದಿ ಬಗ್ಗೆ ಪಕ್ಷಗಳ ವಿಭಿನ್ನ ನಿಲುವು; ವರದಿ ಬಿಡುಗಡೆ ತಡವಾಗ್ತಿರೋದು ಯಾಕಂದ್ರೆ..!

ಬೆಂಗಳೂರು: 'ಕೋಲ್ಡ್‌ ಸ್ಟೋರೇಜ್‌' ಸೇರಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವಿಚಾರ ರಾಜ್ಯ ರಾಜಕಾರಣದಲ್ಲಿ ಮತ್ತೆ ಸದ್ದು ಮಾಡಲಾರಂಭಿಸಿದೆ. 'ಜಾತಿ ಗಣತಿ'ಯೆಂದೇ ಪ್ರಸಿದ್ಧವಾಗಿರುವ ಈ ಸಮೀಕ್ಷೆ ವಿಷಯದಲ್ಲಿ ನಾನಾ ರಾಜಕೀಯ ಪಕ್ಷಗಳು ವಿಭಿನ್ನ ನಿಲುವು ತಳೆದಿವೆ. ಆದರೆ, ಜಾತಿ ಗಣತಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಅನೇಕ ಸಮುದಾಯಗಳ ಸಂಘಟನೆಗಳಿಂದ ಹಕ್ಕೊತ್ತಾಯ ಕೇಳಿ ಬರುತ್ತಿದೆ. ಹಾಗಾಗಿ ಈ ಸಂಬಂಧ ಹಾಲಿ ಸರಕಾರದ ಮೇಲೆ ಒತ್ತಡ ಬೀಳುವಂತಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಈ ಸಮೀಕ್ಷೆ ನಡೆದಿತ್ತು. ಅದಾಗಿ 6 ವರ್ಷ ಕಳೆದರೂ ಈ ಸಮೀಕ್ಷೆಗೆ ಬಿಡುಗಡೆ ಭಾಗ್ಯವೇ ಸಿಕ್ಕಿಲ್ಲ. ಮತ್ತೊಂದೆಡೆ ಈ ಸಮೀಕ್ಷೆಯಲ್ಲಿ ಏನಿರಬಹುದು ಎಂಬ ಬಗ್ಗೆ ಕುತೂಹಲದ ಚರ್ಚೆ ನಡೆದಿದೆ. ಈ ನಡುವೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ದೇಶದಲ್ಲಿ ಜಾತಿ ಸಮೀಕ್ಷೆ ಮಾಡಿಸಬೇಕೆಂದು ಪ್ರಧಾನಿಗೆ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ರಾಜ್ಯದ ಜಾತಿ ಗಣತಿಯ ವರದಿಗೆ ಮಹತ್ವ ಬಂದಂತಾಗಿದೆ. ಇದರ ಬೆನ್ನಿಗೇ ಸಿದ್ದರಾಮಯ್ಯ ಹಾಗೂ ಇತರ ಮುಖಂಡರು ಜಾತಿ ಗಣತಿಯನ್ನು ರಾಜ್ಯ ಸರಕಾರ ಸ್ವೀಕರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಜಾತಿ ಗಣತಿ ಬಗ್ಗೆ ಆಯಾ ಪಕ್ಷಗಳಲ್ಲೇ ಸ್ಪಷ್ಟತೆಯಿಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರು ಈ ಸಮೀಕ್ಷೆ ಪರವಾಗಿ ಸಂದರ್ಭಾನುಸಾರ ಮಾತನಾಡುತ್ತಿದ್ದಾರೆ. ಆದರೆ, ಈ ಕುರಿತು ಕೆಪಿಸಿಸಿಯ ನಿಲುವೇನು ಎಂಬುದು ಸ್ಪಷ್ಟವಿಲ್ಲ. ಬಿಜೆಪಿಯಲ್ಲೂ ಕೆಲವು ಮುಖಂಡರು ಮಾತ್ರ ಈ ಬಗ್ಗೆ ದನಿಯೆತ್ತಿದ್ದಾರೆ. ಜೆಡಿಎಸ್‌ಗೆ ಮಾತ್ರ ಒಂದು ಪ್ರಮಾಣದ ಸ್ಪಷ್ಟತೆ ಇದ್ದಂತಿದೆ. ಯಾಕೆಂದರೆ, ಜಾತಿ ಗಣತಿಯನ್ನು ವಹಿಸಿಕೊಂಡು ಜೆಡಿಎಸ್‌ನ ಯಾರೂ ಮಾತನಾಡುತ್ತಿಲ್ಲ! ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಂತೂ ಈ ಸಮೀಕ್ಷೆಯ ಔಚಿತ್ಯವನ್ನೇ ಪ್ರಶ್ನಿಸಿದ್ದಾರೆ. ಮುಳುವಾಗುವ ಆತಂಕವಿತ್ತುಈ ಜಾತಿ ಗಣತಿ ಸಿದ್ದರಾಮಯ್ಯ ಅವರ ಕನಸಿನ ಕೂಸು. ಮುಖ್ಯಮಂತ್ರಿಯಾಗುವ ಮೊದಲೂ ಈ ಬಗ್ಗೆ ಅವರು ಒತ್ತಾಯ ಮಾಡುತ್ತ ಬಂದಿದ್ದರು. ಮುಖ್ಯಮಂತ್ರಿಯಾದ ಬಳಿಕ ಈ ಸಮೀಕ್ಷೆಗೆ ಚಾಲನೆ ಕೊಡಿಸಿದ್ದರು. ಮನಸ್ಸು ಮಾಡಿದ್ದರೆ ಅವರ ಅಧಿಕಾರವಧಿಯಲ್ಲೇ ಜಾತಿ ಗಣತಿಗೆ ಸಲ್ಲಬೇಕಾದ ನ್ಯಾಯ ಕೊಡಿಸಬಹುದಿತ್ತು. ಆದರೆ, ಈ ಸಮೀಕ್ಷೆ ಬಹಿರಂಗಗೊಂಡರೆ ರಾಜ್ಯದ ಜಾತಿ ಸಮೀಕರಣದ ಲೆಕ್ಕಾಚಾರವೇ ಬುಡಮೇಲಾಗುವ ಸುಳಿವು ಸಿಕ್ಕಿತ್ತು. ಇದರಿಂದಾಗಿ ಪ್ರಬಲ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗುವ ಸನ್ನಿವೇಶ ಸೃಷ್ಟಿಯಾಗುತ್ತಿತ್ತು. ಹಾಗಾಗಿ ಈ ಸಮೀಕ್ಷೆಯನ್ನು ವಿಧಿವತ್ತಾಗಿ ಸ್ವೀಕರಿಸಿ ಬಿಡುಗಡೆ ಮಾಡಲು ಅಂದಿನ ಸರಕಾರ ಹಿಂದೇಟು ಹಾಕಿತು ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಾತಿ ಗಣತಿಯಲ್ಲಿನ ಅಂಕಿ-ಅಂಶ ಹಲವು ಬಾರಿ ಸೋರಿಕೆಯಾಗಿತ್ತು. ಸಾಮಾಜಿಕ ಮತ್ತು ಶೈಕ್ಷಣಿಕ ವರದಿ 2015ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಆರಂಭವಾಗಿದ್ದು 2016ರಲ್ಲಿ ಸಮೀಕ್ಷೆ ಪೂರ್ಣಗೊಂಡಿತ್ತು. ವರದಿಯ ಗಾತ್ರ ಸುಮಾರು 20 ಸಂಪುಟ ಇದ್ದು, ಸಮೀಕ್ಷೆಗೆ 158.47 ಕೋಟಿ ರೂ. ವೆಚ್ಚ ತಗುಲಿದೆ. ರಾಜ್ಯದಲ್ಲಿ ಜನಸಂಖ್ಯೆ ವಿಚಾರದಲ್ಲಿ ಲಿಂಗಾಯತರು ಮೊದಲ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ಒಕ್ಕಲಿಗ ಸಮಾಜವಿದೆ ಎಂದು ಹೇಳಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಂಗ್ರಹಿಸಿದ ಅಂಕಿ ಅಂಶಗಳೇ ಇದಕ್ಕೆ ಆಧಾರ. ಆದರೆ ಹೊಸ ಗಣತಿಯಿಂದ ಸೋರಿಕೆಯಾದ ಅಂಕಿ ಅಂಶಗಳು ಹೇಳುವುದೇ ಬೇರೆ. ಅದರಂತೆ ಪರಿಶಿಷ್ಟರು, ಅಲ್ಪಸಂಖ್ಯಾತರು, ಒಬಿಸಿ ವರ್ಗದವರು ಜನಸಂಖ್ಯೆಯಲ್ಲಿ ಮೊದಲ ಮೂರು ಸ್ಥಾನದಲ್ಲಿ ಬರುತ್ತಾರೆ. ಲಿಂಗಾಯತರು ನಾಲ್ಕನೇ ಹಾಗೂ ಒಕ್ಕಲಿಗರು ಐದನೇ ಸ್ಥಾನದಲ್ಲಿ ಬರುತ್ತಾರೆ. ಈ ಕಾರಣದಿಂದ ಕಾಂಗ್ರೆಸ್‌ ಸರಕಾರ ತನ್ನದೇ ವರದಿಯಿಂದ ದೂರ ಉಳಿಯಿತು ಎಂಬ ಮಾತುಗಳು ಕೇಳಿ ಬಂದಿದ್ದವು. ಎಲ್ಲ ಪಕ್ಷಗಳಿಗೆ ಬಿಸಿ ತುಪ್ಪಈವರೆಗೆ ರಾಜ್ಯದಲ್ಲಿ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯವರು ಸಂಖ್ಯಾಬಲದಲ್ಲಿ ಹೆಚ್ಚಾಗಿದ್ದಾರೆ ಎಂಬ ನಂಬಿಕೆ ಇದೆ. ಅದೇ ಕಾರಣಕ್ಕೆ ಈ ಎರಡು ಸಮುದಾಯಗಳು ರಾಜಕೀಯ ಕ್ಷೇತ್ರದಲ್ಲೂ ಹೆಚ್ಚಿನ ಮನ್ನಣೆ ಜತೆಗೆ ಅವಕಾಶವನ್ನೂ ಪಡೆಯುತ್ತ ಬಂದಿವೆ. ಹಾಗೆಯೇ ಅಧಿಕಾರ ಹಿಡಿಯುವಲ್ಲಿಯೂ ನಿರ್ಣಾಯಕವೆನಿಸಿವೆ. ಆದರೆ ಹೊಸ ಸಮೀಕ್ಷೆ ವರದಿಯಲ್ಲಿ ಜಾತಿಗಳ ಸಂಖ್ಯಾಬಲ ಏರುಪೇರಾಗಿದೆ ಎನ್ನಲಾಗಿದೆ. ಹಾಗಾಗಿ ವರದಿ ಬಹಿರಂಗವಾದರೆ ರಾಜಕೀಯವಾಗಿ ಹಿನ್ನಡೆ ಉಂಟಾಗುವ ಆತಂಕ ಮೂರು ಪಕ್ಷಗಳನ್ನು ಕಾಡುತ್ತಿದ್ದು, ಬಿಸಿ ತುಪ್ಪವಾಗಿ ಪರಿಣಮಿಸಿದಂತಿದೆ.


from India & World News in Kannada | VK Polls https://ift.tt/3zbfqHc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...