ರಾಜಸ್ಥಾನ ಬಿಕ್ಕಟ್ಟು: ಅಧಿವೇಶನಕ್ಕೆ ಇನ್ನೂ ಸಿಗದ ಅನುಮತಿ; ಶುರುವಾಗಿದೆ ಗವರ್ನರ್‌-ಸಿಎಂ ಜಟಾಪಟಿ..!

ಜೈಪುರ: ರಾಜಸ್ಥಾನದಲ್ಲಿನ ರಾಜಕೀಯ ಬಿಕ್ಕಟ್ಟು ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದ್ದು, ಈಗ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ತಿಕ್ಕಾಟಕ್ಕೆ ಸಾಕ್ಷಿಯಾಗಿದೆ. ಸೋಮವಾರದಿಂದ ಅಧಿವೇಶನ ನಡೆಸುವಂತೆ ಕಲ್‌ರಾಜ್‌ ಮಿಶ್ರ ಅವರಿಗೆ ಮನವಿ ಮಾಡಲಾಗಿದೆ. ಆದರೆ, ಕೇಂದ್ರದ ಒತ್ತಡದಿಂದ ರಾಜ್ಯಪಾಲರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಿಎಂ ಆರೋಪಿಸಿದ್ದು, ರಾಜಭವನದಲ್ಲಿ ಬೆಂಬಲಿಗ ಶಾಸಕರ ಪರೇಡ್‌ ನಡೆಸಿದ್ದಾರೆ. ಸೋಮವಾರದಿಂದ ಅಧಿವೇಶನ ಕರೆಯುವಂತೆ ಗುರುವಾರ ಸಂಜೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವು. ಇಡೀ ರಾತ್ರಿ ಕಾದರೂ ರಾಜಭವನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರಳ ಪ್ರಕ್ರಿಯೆ ವಿಳಂಬವಾಗುವುದಕ್ಕೆ ರಾಜ್ಯಪಾಲರ ಮೇಲೆ ಒತ್ತಡ ಬರುತ್ತಿರುವುದು ಕಾರಣವಾಗಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಗೆಹ್ಲೋಟ್‌ ಆರೋಪ ಮಾಡಿದರು. ನಾವು ಸ್ಪಷ್ಟ ಬಹುಮತ ಹೊಂದಿದ್ದೇವೆ. ಸೋಮವಾರದಿಂದ ಅಧಿವೇಶನ ಪ್ರಾರಂಭವಾಗುವುದು ನಮಗೆ ಬೇಕು. ಎಲ್ಲವೂ ಅತಿ ಸ್ಪಷ್ಟವಾಗಿದೆ ಎಂದು ರಾಜ್ಯಪಾಲರ ಭೇಟಿಗೂ ಮುನ್ನ ಅಶೋಕ್ ಗೆಹ್ಲೋಟ್‌ ಹೇಳಿದ್ದರು. ಗೆಹ್ಲೋಟ್‌ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಲ್‌ರಾಜ್‌ ಮಿಶ್ರಾ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕಾನೂನಿನ ನಿಯಮಗಳ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದಿದ್ದಾರೆ. ನಿಮ್ಮ ಸಾಂವಿಧಾನಿಕ ಹುದ್ದೆಯನ್ನು ಗೌರವಿಸಿ, ವಿಧಾನಸಭೆ ಅಧಿವೇಶನವನ್ನು ಯಾವುದೇ ವಿಳಂಬವಿಲ್ಲದೇ ಸೋಮವಾರದಿಂದ ಪ್ರಾರಂಭಿಸಿ ಎಂದು ಗುರುವಾರ ಸಂಜೆ ರಾಜ್ಯಪಾಲರಿಗೆ ಕರೆ ಮಾಡಿ ಹೇಳಲಾಗಿತ್ತು ಎಂದು ಗೆಹ್ಲೋಟ್‌ ತಿಳಿಸಿದ್ದಾರೆ. ಜನ ನಮ್ಮ ಜೊತೆ ಇದ್ದಾರೆ. ರಾಜಭವನದ ಸುತ್ತ ಜನ ಸೇರಿ ಪ್ರತಿಭಟನೆ ನಡೆಸಿದರೆ ನಾವು ಜವಾಬ್ದಾರರಲ್ಲ ಎಂದು ಹೇಳಿದ್ದಾಗಿ ರಾಜಸ್ಥಾನ ಸಿಎಂ ಹೇಳಿದ್ದಾರೆ. ನಂತರ, ತಮ್ಮ ಬೆಂಬಲಿಗ ಶಾಸಕರ ಜೊತೆಗೂಡಿ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರನ್ನು ಅಶೋಕ್‌ ಗೆಹ್ಲೋಟ್‌ ಭೇಟಿ ಮಾಡಿ ಸೋಮವಾರದಿಂದ ಅಧಿವೇಶನ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಈಗ ರಾಜ್ಯಪಾಲ ಮಿಶ್ರಾ ಅವರ ನಿರ್ಧಾರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಶತಾಯಗತಾಯ ಸರಕಾರವನ್ನು ಉಳಿಸಿಕೊಳ್ಳಬೇಕು ಎಂಬ ಜಿದ್ದಲ್ಲಿರುವ ಸಿಎಂ ಅಶೋಕ್‌ ಗೆಹ್ಲೋಟ್‌, ಈಗಾಗಲೇ ಅನರ್ಹತೆ ಅಸ್ತ್ರ ಪ್ರಯೋಗಕ್ಕೆ ಮುಂದಾಗಿ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಶುಕ್ರವಾರ ‌ಪೈಲಟ್‌ ಬಣದ 19 ಶಾಸಕರ ಅನರ್ಹತೆ ನೋಟಿಸ್‌ ಪ್ರಕರಣದ ವಿಚಾರವಾಗಿ ತೀರ್ಪು ನೀಡಿದ್ದ ರಾಜಸ್ಥಾನ ಹೈಕೋರ್ಟ್‌ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸ್ಪೀಕರ್‌ಗೆ ಸೂಚಿಸಿತ್ತು. ಇದರಿಂದ ಸಚಿನ್‌ ಪೈಲಟ್‌ ಕ್ಯಾಂಪ್‌ ಅನರ್ಹತೆಯ ತೂಗುಗತ್ತಿಯಿಂದ ಸದ್ಯಕ್ಕೆ ಪಾರಾಗಿತ್ತು.


from India & World News in Kannada | VK Polls https://ift.tt/2Eg93uB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...