ವಾಷಿಂಗ್‌ಟನ್ ಡಿಸಿ: ಅಮೆರಿಕದ ಅಲಾಸ್ಕ ಸಮೀಪ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆ ದಾಖಲಾಗಿದೆ. ಕೇಂದ್ರ ಬಿಂದುವಿನ ಸುತ್ತ ಸುಮಾರು 300 ಕಿಮೀ ವ್ಯಾಪ್ತಿಯಲ್ಲಿ ಎಚ್ಚರಿಕೆಯನ್ನು ನೀಡಲಾಗಿದ್ದು, ಕರಾವಳಿಯಲ್ಲಿ ಜನತೆಗೆ ಜಾಗೃತೆಯಿಂದ ಇರಲು ಸೂಚಿಸಲಾಗಿದೆ. ಉತ್ತರ ಖಂಡದ ತುದಿಯಲ್ಲಿರುವ ಅಲಾಸ್ಕದಲ್ಲಿ ಭೂಕಂಪನ ಸಂಭವಿಸಿದೆ. ಭಾರತೀಯ ಕಾಲಮಾನ ಸುಮಾರು 11:30 ಹೊತ್ತಿಗೆ ಭೂಮಿ ತೀವ್ರವಾಗಿ ಕಂಪಿಸಿದೆ. 10 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿರುವುದರಿಂದ ಅಲಾಸ್ಕಾ ಪೆನಿನ್ಸುಲಾ ಮತ್ತು ದಕ್ಷಿಣ ಅಲಾಸ್ಕಾದಲ್ಲಿ ಅಪಾಯಕಾರಿ ಸುನಾಮಿಗೆ ಈ ಭೂಕಂಪನ ಎಡೆ ಮಾಡಿಕೊಡಬಹುದು ಎಂದು ತಜ್ಞರು ಹೇಳಿದ್ದಾರೆ. ಸುನಾಮಿ ಎಚ್ಚರಿಕೆಯ ನಂತರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಅಲಾಸ್ಕ ಮಾತ್ರವಲ್ಲದೇ ಅಮೆರಿಕದ ಇತರ ಕರಾವಳಿ ಪ್ರದೇಶ ಹಾಗೂ ಕೆನಡಾದ ಕರಾವಳಿಗೆ ಸುನಾಮಿ ಅಪ್ಪಳಿಸುವ ಸಾಧ್ಯತೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ರಿಂಗ್ ಆಫ್ ಫೈರ್ ಎಂದು ಕರೆಯಲಾಗುವ ಸ್ಥಳದಲ್ಲಿ ಭೂಕಂಪನ ಸಂಭವಿಸಿದೆ. ಈ ಹಿಂದೆಯೂ ಹಲವು ಬಾರಿ ಇಲ್ಲಿ ಭೂಕಂಪನಗಳು ಸಂಭವಿಸಿವೆ. ಮಾರ್ಚ್ 1964ರಲ್ಲಿ 9.2 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇಲ್ಲಿವರೆಗೂ ಉತ್ತರ ಅಮೆರಿಕದಲ್ಲಿ ಸಂಭವಿಸಿದ ಅತಿ ಪ್ರಬಲ ಭೂಕಂಪನ ಇದಾಗಿದೆ. ಇದರಿಂದ ಉತ್ತರ ಅಮೆರಿಕದಲ್ಲಿ ದೊಡ್ಡ ಹಾನಿಯುಂಟಾಗಿತ್ತು. ಗಲ್ಫ್ ಆಫ್ ಅಲಾಸ್ಕಾ, ಅಮೆರಿಕದ ಪಶ್ಚಿಮ ಕರಾವಳಿ ಮತ್ತು ಹವಾಯ್ ಪ್ರಾಂತ್ಯದಲ್ಲಿ ಸುನಾಮಿ ಉಂಟಾಗಿತ್ತು. ಇದರಿಂದ 250ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.
from India & World News in Kannada | VK Polls https://ift.tt/39g2jZ9