ವೃತ್ತಿ ಜೀವನದ ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದ ಕನ್ನಡಿಗ ರಾಹುಲ್‌

ಹೊಸದಿಲ್ಲಿ: ಅವಧಿಯಲ್ಲಿ ಕುಟುಂಬದ ಜತೆ ಸಮಯ ಕಳೆಯುತ್ತಿರುವ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್ ಅವರು ತಮ್ಮ ಹಲವು ವಿಚಾರಗಳನ್ನು ಟಿವಿ ವಾಹಿನಿಯ ನಿರೂಪಕ ಹಾಗೂ ವಿಶ್ಲೇಷಕ ಸುಹೈಲ್‌ ಚಾಂದೋಕ್ ಅವರ ನಡೆಸಿಕೊಡುವ ಐದನೇ ಎಪಿಸೋಡ್‌ "ದಿ ಮೈಂಡ್‌ ಬಿಹೈಂಡ್‌" ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಲಾಕ್‌ಡೌನ್ ಸಮಯ ಕಳೆಯುವ ಬಗ್ಗೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡಿದ ಅನುಭವ, ಅಂತಾರಾಷ್ಟ್ರೀಯ ವೃತ್ತಿ ಜೀವನ, ವೃತ್ತಿ ಜೀವನದ ನೆಚ್ಚಿನ ಬ್ಯಾಟ್ಸ್‌ಮನ್‌ ಎಂಬಿತ್ಯಾದಿ ಹಲವು ವಿಚಾರಗಳ ಬಗ್ಗೆ ಐದನೇ ಆವೃತ್ತಿಯ "ದಿ ಮೈಂಡ್‌ ಬಿಹೈಂಡ್‌" ಕಾರ್ಯಕ್ರಮದಲ್ಲಿ ಕನ್ನಡಿಗ ಮಾತನಾಡಿದ್ದಾರೆ. ಕೊರೊನಾ ವೈರಸ್‌ ಲಾಕ್‌ಡೌನ್‌ ಸಮಯ ಕಳೆಯುತ್ತಿರುವ ಬಗ್ಗೆ ಮಾತನಾಡಿ, "ನಾನು ಮತ್ತು ನನ್ನ ಕುಟುಂಬ ಬೆಂಗಳೂರಿನಲ್ಲಿದ್ದೇವೆ ಹಾಗೂ ಸುರಕ್ಷಿತವಾಗಿದ್ದೇವೆ. ಈ ಅವಧಿಯಲ್ಲಿ ತರಬೇತಿ ಸೇರಿದಂತೆ ನಾನು ಮಾಡಬೇಕಾದ ಎಲ್ಲವನ್ನೂ ಪ್ರಯತ್ನಿಸುತ್ತಿದ್ದೇನೆ. ಮನೆಯಲ್ಲಿ ಸಮಯ ಕಳೆಯುತ್ತಿರುವುದು ತುಂಬಾ ಸಂತೋಷ ತಂದಿದೆ. ಇಷ್ಟು ದಿನ ಕ್ರಿಕೆಟ್‌ ಆಡುತ್ತಿರುವಾಗ ನಾವೆಲ್ಲರೂ ವಿರಾಮವನ್ನು ಬಯಸುತ್ತಿದ್ದೆವು. ಆದರೆ, ಇದೀಗ ನಮಗೆ ಅಂತಹ ದೊಡ್ಡ ವಿರಾಮ ಸಿಕ್ಕಿದೆ," ಎಂದು ಹೇಳಿದರು. " ಈ ಸಮಯ ನಮಗೆ ಸಾಕಷ್ಟು ಪಾಠ ಕಲಿಸುತ್ತಿದೆ ಎಂಬುದನ್ನು ಹೇಳಲು ಇಷ್ಟಪಡುತ್ತೇನೆ. ನನ್ನ ಜೀವನದ ಅತ್ಯಂತ ಮುಖ್ಯ ವಿಷಯವೆಂದರೆ ಆರೋಗ್ಯವಾಗಿರುವುದು ಹಾಗೂ ಕುಟುಂಬದ ಜತೆಗಿರುವುದು. ದೀರ್ಘಾವಧಿಯ ಬಳಿಕ ನನ್ನ ಕುಟುಂಬದ ಜತೆ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದೇನೆ, ಇದು ನನ್ನ ಪಾಲಿಗೆ ಅತ್ಯಂತ ವಿಶೇಷ ಎಂದು ಭಾವಿಸಿದ್ದೇನೆ,"ಎಂದರು. ಯಾವುದಾದರೂ ಪಂದ್ಯವನ್ನು ಬದಲಾಯಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿ,"ನ್ಯೂಜಿಲೆಂಡ್‌ ವಿರುದ್ಧ ಸೋತ ವಿಶ್ವಕಪ್ ಸೆಮಿಫೈನಲ್ ಪಂದ್ಯ ಆಗಿರಬೇಕು. ನಮ್ಮಲ್ಲಿ ಹೆಚ್ಚಿನವರು ಇನ್ನೂ ನಂಬಲಾಗದ ಸೋಲಿನಿಂದ ಹೊರಬಂದಿಲ್ಲ ಎಂದು ನಾನು ಭಾವಿಸುತ್ತೇನೆ. ಆ ಸೋಲು ಇನ್ನೂ ಕೆಲವೊಮ್ಮೆ ನಮ್ಮನ್ನು ಕಾಡುತ್ತದೆ. ಅಂದು ಹಿರಿಯ ಆಟಗಾರರು ಯಾವ ರೀತಿ ನೋವು ತಿಂದರೂ ಎಂಬ ಬಗ್ಗೆ ನಾವು ಊಹಿಸಲು ಸಾಧ್ಯವಿಲ್ಲ. ವಿಶ್ವಕಪ್‌ ಟೂರ್ನಿ ಅಂದಮೇಲೆ ಎಲ್ಲಾ ಪಂದ್ಯಗಳು ಕಠಿಣವಾಗಿರುತ್ತದೆ. ಆದರೆ, ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರುತ್ತಾ ನಾವು ಸಾಗಿದ್ದೆವು. ಈ ಒಂದು ಕಾರಣಕ್ಕಾಗಿಯೇ ಆ ಕಹಿ ಘಟನೆ ನಮ್ಮನ್ನು ಸದಾ ಕಾಡುತ್ತದೆ," ಎಂದು ರಾಹುಲ್‌ ಹೇಳಿದರು. ನಿಮ್ಮ ವೃತ್ತಿ ಜೀವನದಲ್ಲಿ ಯಾವ ಬ್ಯಾಟ್ಸ್‌ಮನ್‌ ಅನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? " ನಾನು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಅವರೊಬ್ಬ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಎಲ್ಲರಿಗೂ ಗೊತ್ತು. ನಮ್ಮಿಬ್ಬರ ನಡುವೆ ಅತ್ಯುತ್ತಮ ಸ್ನೇಹವಿದೆ. ನನ್ನ ಜೀವನಕ್ಕೆ ಬೇಕಾದದನ್ನು ಅವರು ನೀಡಿದ್ದಾರೆ," ಎಂದರು. ಆಸ್ಟ್ರೇಲಿಯಾ ಸಿಡ್ನಿ ಅಂಗಳದಲ್ಲಿ ಸಿಡಿಸಿದ ಚೊಚ್ಚಲ ಶತಕದ ಬಗ್ಗೆ ಮಾತನಾಡಿ, "ಆ ಒಂದು ಇನಿಂಗ್ಸ್‌ ಹಾಗೂ ಸರಣಿ ನನ್ನನ್ನು ತುಂಬಾ ಬದಲಾಯಿಸಿತು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಆಡುವುದು ಎಲ್ಲಾ ಆಟಗಾರರ ಕನಸಾಗಿರುತ್ತದೆ. ಅಂತಹ ವೇದಿಕೆಯಲ್ಲಿ ನಾನು ಅಂದು ಬಾರಿಸಿದ ಶತಕ ನನ್ನ ಆತ್ಮವಿಶ್ವಾಸವನ್ನೇ ಬದಲಾಯಿಸಿತ್ತು ಹಾಗೂ ನನ್ನ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿತ್ತು. ಒಬ್ಬ ಕ್ರಿಕೆಟಿಗನಿಗೆ ಏನು ಅಗತ್ಯವಿತ್ತೋ ಅದನ್ನು ಅಂದು ಪಡೆದುಕೊಂಡಿದ್ದೆ," ಎಂದು ಹೇಳಿದರು. ಸೋಶಿಯಲ್‌ ಮೀಡಿಯಾ ಕಾಮೆಂಟ್‌ಗಳು ನಿಮ್ಮ, ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿ, " ಅದು ಸಾಕಷ್ಟು ಪರಿಣಾಮ ಬೀರುತ್ತದೆ. ಒಬ್ಬ ಆಟಗಾರನಾಗಿ ಕುಟಂಬ ಅಂಥ ಕಾಮೆಂಟ್‌ಗಳಿಂದ ನೋವಿಗೆ ಒಳಗಾಗಿರುವುದನ್ನು ನೋಡಿದಾಗ, ಅದಕ್ಕೆ ಉತ್ತರ ನೀಡುವಾಗ ನಿಜಕ್ಕೂ ಕೆಟ್ಟ ಅನುಭವ ಉಂಟಾಗುತ್ತದೆ. ಆದರೆ, ಕೆಟ್ಟ ಕಾಮೆಂಟ್‌ ಮಾಡಿರುವ ವ್ಯಕ್ತಿಗಳು ನಿಜಕ್ಕೂ ನಾವೆಲ್ಲರೂ ಮನುಷ್ಯರ ಎಂಬ ಭಾವನೆಯನ್ನು ಕೊನೆಗೆ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ಒಬ್ಬ ಕ್ರಿಕೆಟಿಗನ ವೃತ್ತಿ ಜೀವನ ಅಷ್ಟೊಂದು ಸುಲಭಲ್ಲ. ನಾವು ಪ್ರತಿದಿನ 8 ರಿಂದ 10 ಗಂಟೆಗಳ ಕಾಲ ಕಠಿಣ ಪರಿಶ್ರಮ ಪಡುತ್ತೇವೆ. ನಿದ್ರೆ ಮಾಡದ ರಾತ್ರಿಗಳೂ ಇವೆ. ಸಾಕಷ್ಟು ಸಮಯ ನಾವು ಕುಟುಂಬದಿಂದ ದೂರ ಉಳಿಯಬೇಕಾಗುತ್ತದೆ," ಎಂದು ಹೇಳುವ ಮೂಲಕ ಕನ್ನಡಿಗ ಕೆ.ಎಲ್‌ ರಾಹುಲ್‌ ಮಾತು ಮುಗಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Y2tVNK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...