ಹೊಸದಿಲ್ಲಿ: ರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬುಧವಾರ ಒಂದರಲ್ಲೇ 388 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಮಂಗಳವಾರ 315 ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ರಾತ್ರೋರಾತ್ರಿ ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕಿತ ಸಂಖ್ಯೆ ದ್ವಿಗುಣಗೊಂಡಿದ್ದರೆ, ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ದಾಟಿದೆ. ಬುಧವಾರ ಮಧ್ಯರಾತ್ರಿ ವರೆಗೆ ಪರಿಗಣಿಸಿದರೆ ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1,996 ತಲುಪಿದೆ. ಕೇವಲ ನಾಲ್ಕು ದಿನಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಸಾವಿರಕ್ಕೂ ಹೆಚ್ಚು ಎಂಬುದು ಗಮನಾರ್ಹ ವಿಚಾರ. ಮುಂಬಯಿನಲ್ಲಿ ಕೇವಲ 24 ಗಂಟೆಯಲ್ಲಿ ಕೊರೊನಾದಿಂದಾಗಿ 6 ಮಂದಿ ಸಾವನ್ನಪ್ಪಿದ್ದಾರೆ. ದಿಲ್ಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದ್ದು ಒಂದೇ ದಿನದಲ್ಲಿ 32 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಒಂದು ದಿನದಲ್ಲಿ ದಾಖಲಾದ ಹೊಸ ಕೊರೊನಾ ಪ್ರಕರಣಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ. ಬುಧವಾರ ಒಂದು ದಿನದಲ್ಲಿ 33 ಹೊಸ ಕೇಸ್‌ಗಳು ಕಂಡು ಬಂದಿವೆ. ರಾಜಸ್ಥಾನದಲ್ಲಿ 27, ಕೇರಳದಲ್ಲಿ 24, ಮಧ್ಯಪ್ರದೇಶದಲ್ಲಿ 20 ಹೊಸ ಕೊರೊನಾ ಕೇಸ್‌ಗಳು ಪತ್ತೆಯಾಗಿವೆ. ಒಟ್ಟಾರೆ ರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ ಕನಿಷ್ಠ 9 ಮಂದಿ ಮೃತರಾಗಿದ್ದಾರೆ. ದಿಲ್ಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶ ಕೊರೊನಾ ವ್ಯಾಪಿಸಲು ಹಾಟ್‌ಸ್ಪಾಟ್ ಆಗಿ ಪರಿಣಮಿಸಿದ್ದು, 152 ಕೋವಿಡ್-19 ಪ್ರಕರಣಗಳು ರಾಜಧಾನಿಯಲ್ಲಿ ದಾಖಲಾಗಿವೆ. ಈ ಪೈಕಿ 53 ಸೋಂಕಿತರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ರಾಜಧಾನಿಯಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ವಾಪಸಾದ ದಿಲ್ಲಿಯ 536 ಮಂದಿಗೆ ಕೊರೊನಾ ತಗುಲಿರುವ ಸಾಧ್ಯತೆ ಇದೆ. ಇದೀಗ ಇಷ್ಟು ಮಂದಿಯೂ ಕೊರೊನಾ ರೋಗ ಲಕ್ಷಣಗಳಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರವಾಸ ಅಥವಾ ಸೋಂಕಿತರ ಜೊತೆ ಸಂಪರ್ಕದ ಕಾರಣದಿಂದ ದಿಲ್ಲಿಯಲ್ಲಿ ಕನಿಷ್ಠ 6 ಮಂದಿ ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮೂಲಗಳು ಹೇಳಿವೆ. ಅಸ್ಸಾಮ್‌ನಲ್ಲಿ ಇದುವರೆಗೆ ಕೇವಲ 1 ಕೊರೊನಾ ಸೋಂಕು ಕೇಸ್ ಕಂಡುಬಂದಿತ್ತು. ಆದರೆ ಬುಧವಾರ 12 ಹೊಸ ಪಾಸಿಟಿವ್ ಕೇಸ್‌ಗಳು ಕಂಡುಬಂದಿದ್ದು, ಕೊರೊನಾ ಪೀಡಿತರ ಸಂಖ್ಯೆ 13ಕ್ಕೆ ಏರಿದೆ. ಒಟ್ಟಾರೆ ರಾಷ್ಟ್ರದಲ್ಲಿ ಕೊರೊನಾದಿಂದಾಗಿ 57 ಮಂದಿ ಸಾವನಪ್ಪಿದ್ದಾರೆ. ಈ ಪೈಕಿ ಆರೋಗ್ಯ ಸಚಿವಾಲ ದೃಢೀಕರಿಸಿದ ಕೊರೊನಾ ಸೋಂಕಿನಿಂದ ಮೃತರಾದವ ಸಂಖ್ಯೆ 41.
from India & World News in Kannada | VK Polls https://ift.tt/2JybPKY