
ಹೊಸದಿಲ್ಲಿ: ಕೊರೊನಾ ವೈರಸ್‌ಗೆ ತುತ್ತಾಗಿದ್ದ ತುಂಬು ಗರ್ಭಿಣಿಯೊಬ್ಬರು ಶುಕ್ರವಾರ ರಾತ್ರಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಕೋವಿಡ್-19 ಬಗೆಗಿದ್ದ ಭಯವನ್ನು ಅವರು ತೊಡೆದು ಹಾಕಿದ್ದಾರೆ. ದೇಶದಲ್ಲಿ ಕೋವಿಡ್-19 ಸೋಂಕಿತರೊಬ್ಬರು ಮಗುವಿಗೆ ಜನ್ಮ ನೀಡಿದ ಮೊದಲ ಬೆಳವಣಿಗೆ ಇದಾಗಿದೆ. ಇವರ ಪತಿ ವೈದ್ಯರಾಗಿದ್ದು, ಇವರಿಗೂ ಸೋಂಕು ಇದೆ. ತಾಯಿ ಮತ್ತು ಮಗುವನ್ನು ಐಸೋಲೇಷನ್ ವಾರ್ಡ್‌ನಲ್ಲಿ ಇಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಏಮ್ಸ್‌ನಲ್ಲಿ ಸೈಕಾಲಜಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಕೊರೊನಾ ವೈರಸ್ ತಗುಲಿರುವುದು ಮೊದಲಿಗೆ ಬೆಳಕಿಗೆ ಬಂದಿತ್ತು. ಅವರ ಪತ್ನಿ ಮತ್ತು ಸಹೋದರಿಗೂ ಸೋಂಕು ಇರುವುದು ದೃಢಪಟ್ಟಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ದಿಲ್ಲಿಯ ಮೂವರು ವೈದ್ಯರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇವರಲ್ಲಿ ಇಬ್ಬರು ಸಫ್ದರ್‌ಜಂಗ್ ಆಸ್ಪತ್ರೆಯ ವೈದ್ಯರಾಗಿದ್ದಾರೆ. ಇನ್ನೊಬರು ಸರ್ದಾರ್ ವಲ್ಲಭಭಾಯಿ ಪಟೇಲ್ ಆಸ್ಪತ್ರೆ ವೈದ್ಯರಾಗಿದ್ದಾರೆ. ಇದಕ್ಕೂ ಮುನ್ನ ದಿಲ್ಲಿಯ ಮೊಹಲ್ಲಾ ಕ್ಲಿನಿಕ್‌ನ ಇಬ್ಬರು ವೈದ್ಯರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ, ಜೊತೆಗೆ ಆಸ್ಪತ್ರೆ ವೈದ್ಯರಲ್ಲೂ ಕೋವಿಡ್19 ಸೋಂಕು ಕಾಣಿಸಿಕೊಳ್ಳುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ ದೇಶದಲ್ಲಿ 3176 ಕೊರೊನಾ ಸೋಂಕಿತರಿದ್ದಾರೆ. ಇವರಲ್ಲಿ ಬರೋಬ್ಬರಿ 86 ಜನರು ಕೊರೊನಾದಿಂದ ಅಸುನೀಗಿದ್ದಾರೆ. ಕರ್ನಾಟಕದಲ್ಲಿ 128 ಜನರಿಗೆ ಸೋಂಕು ತಗುಲಿದ್ದರೆ, ಇವರಲ್ಲಿ ನಾಲ್ವರು ಅಸುನೀಗಿದ್ದಾರೆ.
from India & World News in Kannada | VK Polls https://ift.tt/2Xf5kEO