ಮುಂಬಯಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಏಪ್ರಿಲ್ 14ರ ವರೆಗೆ ದೇಶದೆಲ್ಲೆಡೆ ಲಾಕ್‌ಡೌನ್ ಘೋಷಿಸಲಾಗಿದೆ. ಇದರಿಂದಾಗಿ ಕ್ರೀಡಾಪಟುಗಳು ಸೇರಿದಂತೆ ಎಲ್ಲರೂ ಮನೆಯಲ್ಲೇ ಕ್ವಾರಂಟೈನ್ ಸಮಯವನ್ನು ಕಳೆಯುವಂತಾಗಿದೆ. ಈ ಮಧ್ಯೆ ಇನ್‌ಸ್ಟಾಗ್ರಾಂ ಪುಟದಲ್ಲಿ ಲೈವ್ ಸಂದರ್ಶನ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮೊದಲು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಹಾಗೂ ವಿಶ್ಲೇಷಣೆಗಾರ ಕೆವಿನ್ ಪೀಟರ್ಸನ್ ಜೊತೆಗೆ ಮಾತುಕತೆ ನಡೆಸಿದ್ದ ರೋಹಿತ್ ಈಗ ಬಲಗೈ ವೇಗದ ಬೌಲರ್ ಜೊತೆಗೆ ವಿಚಾರ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಈ ವೇಳೆಯಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿಶಿಷ್ಟ ಬೌಲಿಂಗ್ ಶೈಲಿಯನ್ನು ಹೊಂದಿರುವ ತಮ್ಮನ್ನು ಆರಂಭದಲ್ಲಿ ಎಲ್ಲರೂ ಕಡೆಗಣಿಸುತ್ತಿದ್ದರು. ಆದರೆ ಅವರೆಲ್ಲರ ಗ್ರಹಿಕೆ ತಪ್ಪು ಎಂಬುದನ್ನು ಸಾಬೀತು ಮಾಡಿದ್ದೇನೆ ಎಂದಿದ್ದಾರೆ. ಇದಕ್ಕಾಗಿ ಸ್ವೀಡನ್ ಫುಟ್ಬಾಲ್ ಸ್ಟಾರ್ ಜ್ಲಾಟನ್ ಇಬ್ರಾಹಿಮೊವಿಕ್ ಜೊತೆ ಹೋಲಿಕೆ ಮಾಡಿದ್ದಾರೆ. "ಇಬ್ರಾ ನನಗೆ ಇಷ್ಟ. ನನ್ನ ಸ್ಟೋರಿಯನ್ನು ಇವರೊಂದಿಗೆ ಹೋಲಿಕೆ ಮಾಡಲು ಇಷ್ಟಪಡುತ್ತೇನೆ. ಆರಂಭದಲ್ಲಿ ಯಾರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಳಿಕ ಅವರು ಸ್ಟಾರ್ ಆದರು. ಪ್ರಾರಂಭದಲ್ಲಿ ಜನರು ನನ್ನನ್ನು ಹಗುರವಾಗಿ ಪರಿಗಣಿಸಿದರು. ಅವರೆಲ್ಲರ ಯೋಚನೆ ತಪ್ಪೆಂದು ಸಾಬೀತು ಮಾಡಿದ್ದೇನೆ. ನಾನೀಗಲೂ ಪ್ರಯತ್ನ ಮಾಡುತ್ತಿದ್ದೇನೆ" ಎಂದು ಬುಮ್ರಾ ವಿವರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ನಂ.1 ಬೌಲರ್ ಆಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪರ ಆಡುವ ಮೂಲಕ ಗಮನ ಸೆಳೆದಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಐಪಿಎಲ್ ಡೆಬ್ಯು ಪಂದ್ಯದಲ್ಲಿ ಬುಮ್ರಾ ಮೊದಲ ಓವರ್‌ನಲ್ಲೇ ವಿರಾಟ್ ಕೊಹ್ಲಿ ಮೂರು ಬೌಂಡರಿಗಳನ್ನು ಚಚ್ಚಿದ್ದರು. ಆದರೆ ಅಲ್ಲಿಂದ ಬಳಿಕ ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದರು. ಅಲ್ಲದೆ ಟೀಮ್ ಇಂಡಿಯಾ ಪರ ಮ್ಯಾಚ್ ವಿನ್ನರ್ ಬೌಲರ್ ಆಗಿ ಮೂಡಿ ಬಂದಿದ್ದಾರೆ. ಅದೇ ಸಂದರ್ಭದಲ್ಲಿ ಶ್ರೀಲಂಕಾದ ಹಿರಿಯ ಅನುಭವಿ ವೇಗದ ಬೌಲರ್ ಲಸಿತ್ ಮಾಲಿಂಗ ಜೊತೆಗಿನ ಬಾಂಧವ್ಯದ ಕುರಿತಾಗಿಯೂ ಬುಮ್ರಾ ಮನದಾಳದ ಮಾತುಗಳನ್ನು ಆಡಿದರು. "ಪ್ರಾರಂಭದಲ್ಲಿ ಮಾತುಕತೆ ಕಷ್ಟವಾಗುತ್ತಿತ್ತು. ಬೌಲರ್ ಮನೋಸ್ಥಿತಿ ಹೇಗಿರಬೇಕೆಂಬುದನ್ನು ಅವರು ಕಲಿಸಿಕೊಟ್ಟರು. ಬ್ಯಾಟ್ಸ್‌ಮನ್ ದಂಡಿಸಿದಾಗಲೂ ನಗುಮುಖದಿಂದಲೇ ಇರುತ್ತಿದ್ದರು. ಆರಂಭದಲ್ಲಿ ನಾನು ಸಿಟ್ಟುಗೊಳ್ಳುತ್ತಿದ್ದೆ. ಆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮಾಲಿಂಗ ಕಲಿಸಿಕೊಟ್ಟರು" ಎಂದರು. ಅದೇ ಹೊತ್ತಿಗೆ ಐಪಿಎಲ್‌ನಲ್ಲಿ ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಜೊತೆಗೆ ಸಮಯ ಕಳೆಯುವುದನ್ನು ಕಾದು ನೋಡುತ್ತಿದ್ದೇನೆ ಎಂದು ಬುಮ್ರಾ ಹೇಳಿದರು. "ಬೌಲ್ಟ್ ಡೆಲ್ಲಿ ತಂಡದಲ್ಲಿದ್ದಾಗ ನಿಧಾನವಾದ ಬೌಲಿಂಗ್ ಹೇಗೆ ಮಾಡಬೇಕು ಎಂಬುದನ್ನು ವಿಚಾರಿಸಿದ್ದೆ. ನ್ಯೂಜಿಲೆಂಡ್ ಪ್ರವಾಸದಲ್ಲೂ ಅವರ ಜೊತೆಗೆ ಮಾತುಕತೆ ನಡೆಸಿದ್ದೆ" ಎಂದರು. ಕೋವಿಡ್ 19 ವೈರಸ್‌ನಿಂದಾಗಿ ಐಪಿಎಲ್ ಏಪ್ರಿಲ್ 15ರ ವರೆಗೆ ಅಮಾನತಿನಲ್ಲಿಡಲಾಗಿದೆ. ಇದರಿಂದಾಗಿ ಈ ಬಾರಿ ಟೂರ್ನಿ ಆಯೋಜನೆಯಾಗುವುದು ಅನುಮಾನವೆನಿಸಿದೆ. ಆದರೆ ಈ ಬಾರಿ ಮುಂಬೈ ತಂಡವು ಎಲ್ಲ ಬೇಸಿಕ್ಸ್‌ಗಳನ್ನು ಹೊಂದಿದೆ ಎಂದವರು ತಿಳಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dMe2jL