ಬೆಂಗಳೂರು: ಮಹಾಮಾರಿ ವಿರುದ್ಧ ಹೋರಾಡಲು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಇರೋದೊಂದೇ ದಾರಿ. ಹೀಗಾಗಿ, ಭಾರತದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಸರ್ಕಾರದ ಈ ಮುನ್ನೆಚ್ಚರಿಕಾ ಕ್ರಮಗಳು ಸ್ವಾಗತಾರ್ಹವೇ. ಜೊತೆಯಲ್ಲೇ ಅಗತ್ಯ ವಸ್ತುಗಳನ್ನು ಖರೀದಿ ಮಾಡಲೂ ಸರ್ಕಾರ ಅನುಮತಿ ನೀಡಿದೆ. ಹಾಲು, ಹಣ್ಣು, ಔಷಧ, ದಿನಸಿ ವಸ್ತುಗಳನ್ನು ಖರೀದಿಸಲು ಜನರು ಮನೆಯಿಂದ ಹೊರಬರಲು ಸರ್ಕಾರವೇ ಅನುಮತಿಯನ್ನೂ ನೀಡಿದೆ. ಆದ್ರೆ, ಪರಿಸ್ಥಿತಿ ಮಾತ್ರ ಇದಕ್ಕಿಂತಾ ತೀರಾ ಭಿನ್ನವಾಗಿರೋದು ಹಲವೆಡೆ ಕಂಡು ಬರ್ತಿದೆ. ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಬರುತ್ತಿರುವ ಜನರ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಇದೀಗ ಜನರಿಗೆ ಕೊರೊನಾ ವೈರಸ್ ಭಯಕ್ಕಿಂತಲೂ ಪೊಲೀಸರ ಲಾಠಿ ಭಯವೇ ಹೆಚ್ಚಾಗಿದೆ..! ಮೈಮೇಲೆ ಬಾಸುಂಡೆ ಬರುವಂತೆ ಹೊಡೆತ ತಿಂದ ಅದೆಷ್ಟೋ ಪ್ರಕರಣಗಳು ರಾಜ್ಯಾದ್ಯಂತ ವರದಿಯಾಗಿವೆ. ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಹಾಲು, ಹಣ್ಣು, ತರಕಾರಿ, ದಿನಸಿ ವಸ್ತುಗಳು ಹಾಗೂ ಔಷಧ ಖರೀದಿಗೆ ಜನರಿಗೆ ಅವಕಾಶ ಇದೆ. ಅವಕಾಶ ಇದೆ ಎಂದರೆ ಅರ್ಥ, ಆಯಾ ಅಂಗಡಿ-ಮಳಿಗೆಗಳನ್ನು ತೆರೆಯಬಹುದು, ಜನರು ಅಲ್ಲಿಗೆ ಹೋಗಿ ಖರೀದಿಸಬಹುದು. ಆದ್ರೆ, ಗುಂಪು ಸೇರೋದು, ಅನಾವಶ್ಯಕವಾಗಿ ಒಂದೆಡೆ ಸೇರೋದು ತಪ್ಪು. ಸರ್ಕಾರದ ಆದೇಶ ಈ ರೀತಿ ಇದ್ದರೆ, ವಾಸ್ತವ ಪರಿಸ್ಥಿತಿಯೇ ಬೇರೆ ಇದೆ. ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಬರುವವರಿಗೆ ಪೊಲೀಸರ ಭೀತಿ ಎದುರಾಗಿದೆ. 21 ದಿನ ಮನೆಯಲ್ಲೇ ಇರೋದು ಅಂದ್ರೆ ಹುಡುಗಾಟದ ವಿಚಾರವಲ್ಲ. ಜೀವನಾವಶ್ಯಕ ವಸ್ತುಗಳ ಖರೀದಿಗಾದ್ರೂ ಜನರು ಬೀದಿಗೆ ಇಳಿಯಲೇ ಬೇಕು. ಹಾಗೆ ಬೀದಿಗೆ ಬರಬಾರದು ಎಂದಾದರೆ ಸರ್ಕಾರ ಜನರಿಗೆ ಅಗತ್ಯ ವಸ್ತುಗಳ ಖರೀದಿಗಾಗಿ ಒಂದು ಸಮಯವನ್ನಾದ್ರೂ ನಿಗದಿ ಮಾಡಬೇಕು. ಇಲ್ಲವೇ ಮನೆ ಮನೆಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸ ಮಾಡಬೇಕು. ಜನರ ಈ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಇಲಾಖೆ ಗಮನಕ್ಕೆ ತಂದಿದ್ದಾರೆ. ಜೀವನಾವಶ್ಯಕ ವಸ್ತುಗಳಾದ ಹಣ್ಣು, ತರಕಾರಿ, ದಿನಸಿ ಸಾಮಾನುಗಳನ್ನು ಕೊಳ್ಳಲು ಮನೆಯಿಂದ ಹೊರ ಹೋದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವುದು ಅಮಾನವೀಯ ಮತ್ತು ಖಂಡನೀಯ. ಮತ್ತೆ ಇಂತಹ ಘಟನೆಗೆ ಆಸ್ಪದ ನೀಡದೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಬೇಕು ಎಂದು ಪೊಲೀಸ್ ಕಮಿಷನರ್ ಅವರಿಗೆ ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುವ ಹಂತದಲ್ಲಿ ಜನರಿಗೆ ಆದಷ್ಟೂ ಜಾಗೃತಿ ಮೂಡಿಸಬೇಕು. ಅನಗತ್ಯವಾಗಿ ಬೀದಿಗೆ ಇಳಿಯುವ ಜನರಿಗೆ ದಂಡ ವಿಧಿಸಬೇಕು. ಅದರ ಬದಲು ಸುಖಾಸುಮ್ಮನೆ ಮಾತೆತ್ತಿದರೆ ಲಾಠಿ ಎತ್ತೋದು ಎಷ್ಟರ ಮಟ್ಟಿಗೆ ಸರಿ? ಕೊರೊನಾ ವೈರಸ್ ಹೆಸರಲ್ಲಿ ಪೊಲೀಸ್ ರಾಜ್ ಏಕೆ ಅನ್ನೋದಷ್ಟೇ ಜನ ಸಾಮಾನ್ಯರ ಪ್ರಶ್ನೆ. ಜನರ ತಪ್ಪೂ ಇದೆ..! ಈ ಹಂತದಲ್ಲಿ ಜನರ ತಪ್ಪೂ ಇಲ್ಲ ಎನ್ನುವಂತಿಲ್ಲ. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಮನೆಯಿಂದ ಹೊರಟು ನಗರದ ತುಂಬೆಲ್ಲಾ ಸುತ್ತಾಡುವ ಜನರಿದ್ದಾರೆ. ಯುವಕರು ಮೊಬೈಲ್ ಕೈಯ್ಯಲ್ಲಿ ಹಿಡಿದು ಸುಮ್ಮನೆ ಅಲೆದಾಡುತ್ತಿದ್ಧಾರೆ. ಗುಂಪು ಕಟ್ಟಿಕೊಂಡು ಮಾತನಾಡೋದು, ಹರಟೋದೂ ಜಾಸ್ತಿಯಾಗಿದೆ. ಈ ಹಂತದಲ್ಲಿ ಜನರೂ ತಮ್ಮ ಜವಾಬ್ದಾರಿ ಅರಿಯಬೇಕಿದೆ.
from India & World News in Kannada | VK Polls https://ift.tt/2Utq8W8