ಮೀರ್ಪುರ (ಪಾಕಿಸ್ತಾನ): ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ಕೊಡಲು ಭಾರತ ಕೋಟ್ಯಂತರ ರೂಪಾಯಿ ವ್ಯಯಿಸಿ ಐಸೋಲೇಷನ್ ಕೇಂದ್ರಗಳನ್ನು ನಿರ್ಮಿಸುತ್ತಿದೆ. ಇತ್ತ ಪಾಕಿಸ್ತಾನ ಮಾತ್ರ, ಕಸ ಸುರಿಯುವ ರೀತಿಯಲ್ಲಿ ಸೋಂಕಿತರನ್ನು ದೇಶದ ಗಡಿ ಭಾಗದಲ್ಲಿ ‘ಡಂಪ್’ ಮಾಡುತ್ತಿದೆ..! ಭಾರತ ಪಾಕ್ ಗಡಿಯಲ್ಲಿ ಇರುವ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನ ಪ್ರಾಂತ್ಯಗಳಿಗೆ ಕೊರೊನಾ ವೈರಸ್ ಸೋಂಕಿತರನ್ನು ತಂದು ಸುರಿಯುತ್ತಿದೆ ಪಾಕಿಸ್ತಾನ ಸೇನೆ. ಪಂಜಾಬ್ ಪ್ರಾಂತ್ಯದಲ್ಲಿ ಇರುವ ಕೊರೊನಾ ವೈರಸ್ ಸೋಂಕಿತರನ್ನು ಅಲ್ಲಿಂದ ತೆರವುಗೊಳಿಸಿ ನೇರವಾಗಿ ಗಡಿ ಭಾಗಕ್ಕೆ ಕರೆತರಲಾಗುತ್ತಿದೆ. ಗಡಿ ಭಾಗದಲ್ಲಿ ಕೊರೊನಾ ವೈರಸ್ ಸೋಂಕಿತರಿಗಾಗಿಯೇ ವಿಶೇಷ ಶಿಬಿರವನ್ನು ಸಿದ್ಧಗೊಳಿಸಲಾಗಿದದು, ದೇಶದೆಲ್ಲೆಡೆಯ ಸೋಂಕಿತರು ಒಂದೇ ಸೂರಿನಡಿ ಇರಲಿದ್ದಾರೆ. ಪಾಕಿಸ್ತಾನದಾದ್ಯಂತ ಇರುವ ಸೇನಾ ನೆಲೆಗಳು, ಸೈನಿಕರ ವಸತಿ ಗೃಹ ಸೇರಿದಂತೆ ಎಲ್ಲೆಡೆ ಸೋಂಕಿತರನ್ನು ಹುಡುಕಿ ಗಡಿ ಭಾಗಕ್ಕೆ ತಂದು ಸುರಿಯುತ್ತಿದ್ಧಾರೆ. ಗಡಿ ಭಾಗದ ಮೀರ್ಪುರ ಸೇರಿದಂತೆ ಹಲವು ಪ್ರದೇಶಗಳ ಜನರು, ಸರ್ಕಾರದ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ, ಜನರ ಪ್ರತಿಭಟನೆಗೆ ಸೇನೆ ಸೊಪ್ಪು ಹಾಕುತ್ತಿಲ್ಲ. ಭಾರತ-ಪಾಕ್ ಗಡಿ ಭಾಗದ ಈ ಶಿಬಿರಗಳಲ್ಲಿ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳೇ ಇಲ್ಲ. ಇನ್ನು ವೈದ್ಯರು ಹಾಗೂ ದಾದಿಯರ ಮುಖವೇ ಕಾಣೋದಿಲ್ಲ. ಹೀಗಾಗಿ, ಪಾಕಿಸ್ತಾನದೆಲ್ಲೆಡೆಯ ರೋಗಿಗಳು ಇಲ್ಲಿಗೆ ಬಂದರೆ, ಇಡೀ ಪ್ರದೇಶವೇ ರೋಗಗ್ರಸ್ಥವಾಗುತ್ತೆ ಎಂಬ ಆತಂಕದಲ್ಲಿ ಜನರಿದ್ದಾರೆ. ಭಾರತ-ಪಾಕ್ ಗಡಿಯ ಮುಜಾಫರಾಬಾದ್ನ ನಿವಾಸಿಗಳ ಕಥೆಯೂ ಇದೇ ರೀತಿಯದ್ದಾಗಿದೆ. ತಮ್ಮ ಇಡೀ ನಗರ ಕೊರೊನಾ ವೈರಸ್ ಸೋಂಕಿತರಿಂದಲೇ ತುಂಬಿ ಹೋಗುವ ಭೀತಿಯಲ್ಲಿದ್ದಾರೆ. ಪಾಕಿಸ್ತಾನ ಸೇನೆ ಗಡಿ ಭಾಗದ ಜನರ ಬಗ್ಗೆ ಚಿಂತಿಸುತ್ತಿಲ್ಲ. ಅದು ಕೇವಲ ಪಂಜಾಬ್ ಪ್ರಾಂತ್ಯ ಸೇರಿದಂತೆ ಪ್ರಮುಖ ನಗರಗಳ ಬಗ್ಗೆ ಮಾತ್ರ ಆಸಕ್ತಿ ವಹಿಸಿದೆ ಎಂದು ಗಡಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
from India & World News in Kannada | VK Polls https://ift.tt/2JmCfiA