ಮಂಗಳೂರು: ಕೊರೊನಾ ಸೋಂಕು ಕಾರಣಕ್ಕಾಗಿ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯೋರ್ವನ ಮೇಲೆ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ನಿವಾಸಿ ಮಾರ್ಚ್ 22 ರಂದು ದುಬೈನಿಂದ ಬಂದಿದ್ದ. ವಿಮಾನ ನಿಲ್ದಾಣದಲ್ಲಿ ಇವರ ಕೈಗೆ ಮುದ್ರೆ ಹಾಕಿ ಕ್ವಾರಂಟೈನ್ ಪಾಲನೆ ಮಾಡಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ ಈ ಸೂಚನೆಯನ್ನು ಪಾಲಿಸದೆ ಈ ವ್ಯಕ್ತಿ ಬೆಳ್ತಂಗಡಿಯಲ್ಲಿ ತಿರುಗಾಟ ನಡೆಸಿದ್ದ. ಕುಟುಂಬಸ್ಥರು ಸೇರಿದಂತೆ ಸ್ನೇಹಿತರನ್ನು ಭೇಟಿಯಾಗಿದ್ದ. ಮಾರ್ಚ್ 24 ರಂದು ಈತನಲ್ಲಿ ಕೊರೊನಾ ಸೋಂಕು ಕಂಡುಬಂದಿತ್ತು. ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಈತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ವ್ಯಕ್ತಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೊರೊನಾ ಸೋಂಕು ಈ ವ್ಯಕ್ತಿಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಹಲವೆಡೆ ಈತ ಸಂಚರಿಸಿದ್ದು ಅಧಿಕಾರಿಗಳು ಈ ಕುರಿತಾದ ರೂಟ್ ಮ್ಯಾಪನ್ನು ಈಗಾಗಲೇ ಬಿಡುಗಡೆಗೊಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಏಳು ಕೊವಿಡ್ -19 ಪ್ರಕರಣಗಳು ಪತ್ತೆಯಾಗಿವೆ. ಇವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದ್ದು ಜನರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
from India & World News in Kannada | VK Polls https://ift.tt/2QVYekP