ವಾಷಿಂಗ್ಟನ್: ಜಗತ್ತು ಈಗ ಕೊರೊನಾ ಸುಳಿಯಲ್ಲಿ ಸಿಲುಕಿದೆ. ಹೇಗಾದರೂ ಮಾಡಿ ಈ ವೈರಾಣುವಿನಿಂದ ಮುಕ್ತಿ ಪಡೆದರೆ ಸಾಕು ಎಂದು ಇಡೀ ಜಗತ್ತು ಕಾದು ಕುಳಿತಿದೆ. ಇದಕ್ಕೆ ಹಾಗೂ ಕೂಡ ಹೊರತಾಗಿಲ್ಲ. ಅಮೆರಿಕದಲ್ಲಿ 83 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಪ್ರಕರಣಗಳು ಪತ್ತೆಯಾದ ದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಲ್ಲದೇ ಅಮೆರಿಕದಲ್ಲಿ ಇದುವರೆಗೂ ಒಟ್ಟು 1,178 ಸಾವು ಸಂಭವಿಸಿದೆ. ಆದರೆ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಅಮೆರಿಕ-ಇರಾನ್ ಮಾತ್ರ ತಮ್ಮ ವೈಷಮ್ಯವನ್ನು ಮರೆತಿಲ್ಲ. ಇರಾನ್ ಮೇಲೆ ಆರ್ಥಿಕ ದಿಗ್ಬಂಧನ, ಇರಾನ್ ನ ಉನ್ನತ ಸೇನಾ ಕಮಾಂಡರ್ ಹತ್ಯೆ, ಅದಕ್ಕೆ ಇರಾನ್ ಪ್ರತಿಕ್ರಿಯೆ ಇವೆಲ್ಲಾ ತಣ್ಣಗಾಗುವಷ್ಟರಲ್ಲೇ, ಎಫ್‌ಬಿಐ ಏಜೆಂಟ್‌ವೋರ್ವನ ನಾಪತ್ತೆ ಪ್ರಕರಣ ಇದೀಗ ಮತ್ತೆ ಅಮೆರಿಕ-ಇರಾನ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಇರಾನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತದ್ದ ಅಮೆರಿಕದ ರಾಬರ್ಟ್ ಲೆವಿನ್ಸನ್ ನಾಪತ್ತೆಯಾಗಿದ್ದಾರೆ. ಈ ಪ್ರಕರಣ ಇದೀಗ ಅಮೆರಿಕ-ಇರಾನ್ ನಡುವೆ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ರಾಬರ್ಟ್ ಲೆವಿನ್ಸನ್ ಇರಾನ್‌ನಲ್ಲೇ ಸಾವನ್ನಪ್ಪಿರುವುದಾಗಿ ಅಮೆರಿಕ ಹೇಳುತ್ತಿದ್ದರೆ, ಆತ ದೇಶ ಬಿಟ್ಟು ದಶಕಗಳೇ ಉರುಳಿವೆ ಎಂದು ಇರಾನ್ ವಾದಿಸುತ್ತಿದೆ. 2007ರಲ್ಲಿ ಇರಾನ್‌ನಲ್ಲಿ ಗುಪ್ತಚರ ಮಾಹಿತಿ ಸಂಗ್ರಹಿಸಲು ಬಂದಿದ್ದ ರಾಬರ್ಟ್ ಲೆವಿನ್ಸನ್, ಇದುವರೆಗೂ ಪತ್ತೆಯಾಗಿಲ್ಲದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇರಾನ್ ರಾಬರ್ಟ್ ಲೆವಿನ್ಸನ್ ಅವರನ್ನು ಕೊಂದು ಹಾಕಿದೆ ಎಂದು ಅಮೆರಿಕ ಹೇಳುತ್ತಿದ್ದರೆ, ನಾವು ಬಂಧಿಸುವ ಮೊದಲೇ ಎಫ್‌ಬಿಐ ಏಜೆಂಟ್ ದೇಶ ತ್ಯಜಿಸಿದ್ದಾಗಿ ಇರಾನ್ ಹೇಳುತ್ತಿದೆ. ಆದರೆ ರಾಬರ್ಟ್ ಲೆವಿನ್ಸನ್ ಸಾವನ್ನು ಅಧಿಕೃತವಾಗಿ ದೃಢಪಡಿಸದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆತನ ನಾಪತ್ತೆ ಪ್ರಕರಣದಲ್ಲಿ ಇರಾನ್ ಕೈವಾಡವಿರುವುದು ಸ್ಪಷ್ಟ ಎಂದಷ್ಟೇ ಹೇಳಿದ್ದಾರೆ. ಅಲ್ಲದೇ ರಾಬರ್ಟ್ ಲೆವಿನ್ಸನ್ ಇರುವಿಕೆಯನ್ನು ಇರಾನ್ ದೃಢೀಕರಿಸಬೇಕು ಎಂದೂ ಟ್ರಂಪ್ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಅಮೆರಿಕ-ಇರಾನ್ ನಡುವಿನ ದ್ವೇಷ ತಣ್ಣಗಾಗಿದೆ ಎಂದು ನಿಟ್ಟುಸಿರುವ ಬಿಡುವಷ್ಟರಲ್ಲೇ ಎಫ್‌ಬಿಐ ಏಜೆಂಟ್ ನಾಪತ್ತೆ ಪ್ರಕರಣ ಮತ್ತೆ ಉರಿಯುವ ಬೆಂಕಿಗೆ ತುಪ್ಪ ಸುರಿದಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.
from India & World News in Kannada | VK Polls https://ift.tt/2QPfqZ5