ಹೊಸದಿಲ್ಲಿ: ದಿಲ್ಲಿ ನಿಜಾಮುದ್ದೀನ್ ಪ್ರದೇಶದಲ್ಲಿರುವ 'ಅಲಾಮಿ ಮಾರ್ಕಜ್ ಬಂಗ್ಲೇವಾಲಿ' ಮಸೀದಿಯಲ್ಲಿ ಮಾರ್ಚ್‌ನಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದ ಧಾರ್ಮಿಕ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳಿಗಾಗಿ ದೇಶಾದ್ಯಂತ ಹುಡುಕಾಟ ಆರಂಭವಾಗಿದೆ. ಮಾರ್ಚ್ 13ರಿಂದ 15ರ ಅವಧಿಯಲ್ಲಿ ನಡೆದ ಸಮಾವೇಶದಲ್ಲಿ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ತೆಲಂಗಾಣ ಸೇರಿ ವಿವಿಧ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಂದ ಸಾವಿರಾರು ಜನರು ಪಾಲ್ಗೊಂಡು ಬಳಿಕ ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ದೇಶಾದ್ಯಂತ 10 ಮಂದಿ ಸೋಂಕಿಗೆ ಬಲಿಯಾದವರು ಇದೇ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ. ಈ ರೀತಿ ಸೋಂಕು ಹರಡಲು ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಕಾರಣವಾಗಿದ್ದು, ಸಮಾವೇಶದಲ್ಲಿ ಪಾಲ್ಗೊಂಡಿದ್ದವರ ಹುಡುಕಾಟಕ್ಕೆ ರಾಜ್ಯ ಸರಕಾರಗಳು ಕಾರ್ಯಾಚರಣೆ ತೀವ್ರಗೊಳಿಸಿವೆ. ಸವಾಲಿನ ಕೆಲಸ: ದಕ್ಷಿಣ ದಿಲ್ಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಸೂಫಿ ಸಂತ ನಿಜಾಮುದ್ದೀನ್ ಔಲಿಯಾ ದರ್ಗಾ ಸಮೀಪವೇ ಬಂಗ್ಲೇವಾಲಿ ಮಸೀದಿ ಇದೆ. ಚಿಕ್ಕ ಗೇಟು, ಕಿಷ್ಕಿಂಧೆಯಂತಹ ರಸ್ತೆಯಲ್ಲಿರುವ ಮಸೀದಿ ಕಟ್ಟಡ ನಾಲ್ಕು ಮಹಡಿಗಳನ್ನು ಹೊಂದಿದೆ. ಇದೊಂದು ಜನನಿಬಿಡ ಪ್ರದೇಶ. ಯಾರು ಒಳಹೋದರು, ಹೊರಬಂದರು ಎಂದು ಪತ್ತೆ ಹಚ್ಚುವುದೇ ಕಷ್ಟ. ಇಂತಹ ಕಟ್ಟಡದಲ್ಲಿ ಸೋಮವಾರದವರೆಗೂ 2000 ಜನ ಇದ್ದಿದ್ದರಿಂದ ಸೋಂಕು ಶರವೇಗದಲ್ಲಿ ಹರಡಿರುವ ಸಾಧ್ಯತೆಗಳಿವೆ. ಹೀಗಾಗಿ ಕಾರ‍್ಯಕ್ರಮದಲ್ಲಿ ಪಾಲ್ಗೊಂಡವರಿಗಾಗಿ ರಾಜ್ಯ ಸರಕಾರಗಳು ಹುಡುಕಾಟ ನಡೆಸಿದ್ದರೂ ಅದೊಂದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯ: ಲಾಕ್‌ಡೌನ್ ಆದೇಶ ಜಾರಿಯಾದ ನಂತರವೇ ಇಲ್ಲಿ ಜನರ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಅದಕ್ಕೂ ಮೊದಲೇ ಕೊರೊನಾ ಸೋಂಕು ತಗುಲಿಸಿಕೊಂಡಿದ್ದವರ ಪೈಕಿ ಕೆಲವರು ಈ ಕಾರ‍್ಯಕ್ರಮದಲ್ಲಿ ಭಾಗಿಯಾಗಿದ್ದರೆಂಬುದು ಗೊತ್ತಾಗಿದ್ದರೂ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಿದರು ಎಂಬ ಆರೋಪ ಕೇಳಿಬಂದಿದೆ. ವಿದೇಶಿಯರನ್ನು ಹೆಚ್ಚಿನ ರೀತಿಯಲ್ಲಿ ತಪಾಸಣೆಗೊಳಪಡಿಸದೇ ಒಳಬಿಟ್ಟಿದ್ದರು ಎನ್ನಲಾಗಿದೆ. ಪ್ರದೇಶದಲ್ಲಿ ವೈದ್ಯಕೀಯ ಶಿಬಿರಗಳನ್ನೂ ತೆರೆಯಲಿಲ್ಲ ಎನ್ನಲಾಗಿದೆ. ಈಗ ಎಚ್ಚೆತ್ತುಕೊಂಡಿರುವ ದಿಲ್ಲಿ ಪಾಲಿಕೆ 30 ಸಾವಿರ ಲೀಟರ್ ಸೋಂಕು ನಿವಾರಕ ದ್ರಾವಣದಿಂದ ಪ್ರದೇಶವನ್ನು ಸ್ವಚ್ಛಗೊಳಿಸಿದೆ. ಸೋಂಕಿತರ ಸಂಖ್ಯೆ ಭಾರತದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದುವರೆಗೆ ರಾಷ್ಟ್ರದಲ್ಲಿ 1,590 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 124 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 102ಕ್ಕೆ ಏರಿಕೆಯಾಗಿದ್ದು, ಮೂವರು ಸಾವನ್ನಪ್ಪಿದರೆ ಆರು ಮಂದಿ ಗುಣಮುಖರಾಗಿದ್ದಾರೆ. ರಾಷ್ಟ್ರದಲ್ಲೇ ಅತಿಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿರುವುದು ಮಹಾರಾಷ್ಟ್ರದಲ್ಲಿ. ಇದುವರೆಗೆ 302 ಪ್ರಕರಣಗಳು ದಾಖಲಾಗಿದ್ದರೆ, 10 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ 39 ಮಂದಿ ಗುಣಮುಖರಾಗಿದ್ದಾರೆ. ರಾಷ್ಟ್ರದಲ್ಲೇ ಮೊದಲ ಸೋಂಕು ಪತ್ತೆಯಾದ ಕೇರಳದಲ್ಲಿ ಇದುವರೆಗೆ ಸೋಂಕಿತರ 241ಕ್ಕೆ ಏರಿಕೆಯಾಗಿದೆ. ಮೂವರು ಸಾವನ್ನಪ್ಪಿದ್ದು, 24 ಮಂದಿಗೆ ಗುಣವಾಗಿದೆ.
from India & World News in Kannada | VK Polls https://ift.tt/2w3fnSm