ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ಸಂದರ್ಭದಲ್ಲಿ ಸುಳ್ಳು ಸುದ್ದಿಗಳು ಹರಡದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಹಿರಂಗಪಡಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಎಚ್.ಕೆ ಪಾಟೀಲ್, ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸದಂತೆ ವಿನಂತಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕು ತೀವೃ ಸ್ವರೂಪದಲ್ಲಿ ಹರಡುತ್ತಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ಇದಕ್ಕಾಗಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಮೂಲಗಳಿಂದ ಬಂದಿದೆ ಎಂದು ಎಚ್.ಕೆ ಪಾಟೀಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಸರ್ಕಾರ ಇಂತಹ ಕ್ರಮವನ್ನು ಈ ಸಂದರ್ಭದಲ್ಲಿ ಕೈಗೊಳ್ಳಬಾರದು ಎಂದು ಆಗ್ರಹಿಸಿದ್ದಾರೆ. ಕೊರೊನಾ ಕುರಿತಾಗಿ ಯಾರು ಸುಳ್ಳು ಸುದ್ದಿ ಹರಡುತ್ತಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಿ, ಅದರ ಹೊರತಾಗಿ ಇಡೀ ವ್ಯವಸ್ಥೆಯನ್ನು ನಿಲುಗಡೆ ಮಾಡಬಾರದು. ಒಂದು ವೇಳೆ ಸರ್ಕಾರಕ್ಕೆ ಅಂತಹ ಯಾವುದೇ ಆಲೋಚನೆ ಇದ್ದರೆ ಅದನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಡಲು ಜಿಪಿಎಸ್ ಅಥವಾ ಚಿಪ್ ಅವಳವಡಿಸಿ ಎಂದು ಒತ್ತಾಯಿಸಿರುವ ಎಚ್.ಕೆ ಪಾಟೀಲ್, ದೇಶದಲ್ಲಿರುವ ನಾಗರಿಕರಿಗೆ ಸೋಂಕು ತಗಲಿದ್ದರೆ ಅವರನ್ನು ಕೂಡಾ ಕ್ವಾರಂಟೈನ್‌ಗೆ ಒಳಪಡಿಸಿ ಎಂದಿದ್ದಾರೆ. ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟಲು ಪ್ರಯೋಗಾಲಗಳನ್ನು ಸಾಧ್ಯವಾದಷ್ಟು ಬೇಗ ಸ್ಥಾಪಿಸಲು ಖಾಸಗಿ ಲ್ಯಾಬ್‌ಗಳಿಗೆ ಅನುಮತಿಕೊಡುವ ಬಗ್ಗೆ ಚರ್ಚೆ ನಡೆದಿತ್ತು. ನಿಮ್ಹಾನ್ಸ್‌ನಲ್ಲಿಯೂ ಕೂಡಾ ಲ್ಯಾಬ್ ತೆರೆಯಲು ನಿರ್ಧರಿಸಲಾಗಿತ್ತು. ಆದರೆ ಅಲ್ಲೂ ಕಾರ್ಯಾರಂಭ ಆಗಿಲ್ಲ. ಸರ್ಕಾರ ಅಗತ್ಯ ಕ್ಲಿಯರೆನ್ಸ್‌ಗಳಿಗಾಗಿ ನಿರೀಕ್ಷಿಸುತ್ತಾ ವಿಳಂಬವಾಗುತ್ತಿದೆ ಎಂದು ಆರೋಪಿಸಿದ ಪಾಟೀಲ್, ಸಾಧ್ಯವಾದಷ್ಟು ಬೇಗ ಪ್ರಯೋಗಾಲಯವನ್ನು ಪ್ರಾರಂಭಿಸಲು ಒತ್ತಾಯಿಸಿದ್ದಾರೆ.
from India & World News in Kannada | VK Polls https://ift.tt/2Jk8ijq