ಮುಂಬಯಿ: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಇಡೀ ಭಾರತವೇ ಲಾಕ್‌ಡೌನ್ ಆಗಿದೆ. ಈ ಸಂದಿಗ್ಧ ಪರಿಸ್ಥಿತಿ ಆದಷ್ಟು ಬೇಗನೇ ಹಾದು ಹೋಗಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ. ಸೋಂಕಿತರ ರಕ್ಷಣೆಗಾಗಿ ಸರಕಾರ ಹಾಗೂ ವೈದ್ಯಕೀಯ ಇಲಾಖೆಗಳು ಹರಸಾಹಸ ಪಡುತ್ತಿದೆ. ಈ ಮಧ್ಯೆ ಬಹುತೇಕ ಎಲ್ಲ ಕ್ರೀಡಾ ಚಟುವಟಿಕೆಗಳು ರದ್ದುಗೊಂಡಿದೆ. ಸೆಲೆಬ್ರಿಟಿಗಳು ಸಹ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಸೇರಿದಂತೆ ಜನಪ್ರಿಯ ಕ್ರಿಕೆಟ್ ಸ್ಟಾರ್‌ಗಳು, ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಮನೆಯಲ್ಲಿ ತಮ್ಮ ಕುಟುಂಬದ ಜೊತೆಗೆ ಕಳೆಯುತ್ತಿರುವ ರೋಹಿತ್ ಶರ್ಮಾ, ಮಗಳು ಸಮೈರಾಗೆ ಬ್ಯಾಟಿಂಗ್ ಕೋಚ್ ಆಗುವ ಮೂಲಕ ಗಮನ ಸೆಳೆದಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಲಾಗಿದ್ದು, ಹೆಚ್ಚಿನ ಗಮನ ಸೆಳೆಯುತ್ತಿದೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಗಳ ಜನನದೊಂದಿಗೆ ಜೀವನವೇ ಬದಲಾಗಿದೆ ಎಂದು ರೋಹಿತ್ ಶರ್ಮಾ ಹೇಳಿಕೊಂಡಿದ್ದರು. ಕ್ರಿಕೆಟ್‌ನಿಂದ ಬಿಡುವಿನ ವೇಳೆಯಲ್ಲಿ ಮಗಳು ಹಾಗೂ ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯಲು ಬಯಸುವುದಾಗಿ ತಿಳಿಸಿದ್ದರು. ಇದೀಗ ಕೋವಿಡ್ 19 ಸೋಂಕಿನಿಂದಾಗಿ ಆಟಗಾರರು ಮನೆಯಲ್ಲೇ ಉಳಿಯುವಂತಾಗಿದೆ. ಕಳೆದ ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಸರಣಿ ವೇಳೆಯಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಪರಿಣಾಮ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಹಿಂತಿರುಗಿದ್ದರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭರ್ಜರಿ ಪುನರಾಗಮವನ್ನು ಎದುರು ನೋಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ರೋಹಿತ್ ಶರ್ಮಾ, ಕಳೆದ ಸಾಲಿನಲ್ಲೂ ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದ್ದರು. ಅಂದ ಹಾಗೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ಆಯೋಜನೆಯಾಗುವುದೇ ಅನುಮಾನವೆನಿಸಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2J8UCrc