ಮತ್ತಷ್ಟು ಋಣಭಾರದ ಆತಂಕ: ಬದ್ಧತಾ ವೆಚ್ಚದ ಭಾರದಲ್ಲಿ ಸೊರಗಿದ ರಾಜ್ಯ

ಶಶಿಧರ ಹೆಗಡೆ ಬೆಂಗಳೂರು: ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದರಲ್ಲಿ ಅತ್ಯಂತ ಪ್ರಗತಿಪರ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕರ್ನಾಟಕವೀಗ ‘ಬದ್ಧತಾ ವೆಚ್ಚ’ಗಳ ಭಾರದಿಂದ ಹೈರಾಣಾಗಿದೆ. ಈ ವರ್ತುಲದಿಂದ ಹೊರ ಬಾರದಿದ್ದರೆ ಋಣಭಾರವೂ ಹೆಚ್ಚಲಿದೆ. ರಾಜ್ಯದ ಒಟ್ಟು ಆದಾಯ ಸ್ವೀಕೃತಿಯಲ್ಲಿ ಶೇ.90ರಷ್ಟನ್ನು ಬದ್ಧತಾ ವೆಚ್ಚಗಳಿಗೆ ಮೀಸಲಿಡುವ ಸನ್ನಿವೇಶ ಸೃಷ್ಟಿಯಾಗಿದೆ. ಅಂದರೆ 1 ರೂ.ದಲ್ಲಿ 90 ಪೈಸೆ ಸಬ್ಸಿಡಿ ಕಾರ್ಯಕ್ರಮ, ವೇತನ, ಪಿಂಚಣಿ ಇನ್ನಿತರ ಬದ್ಧತಾ ವೆಚ್ಚಕ್ಕೆ ವ್ಯಯವಾಗಲಿದೆ. ಉಳಿದ 10 ಪೈಸೆಯಲ್ಲಿ ನಾನಾ ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಬೇಕಾಗುತ್ತದೆ. ಹೊಸ ಯೋಜನೆಗಳನ್ನೂ ಪ್ರಕಟಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಇಂತಹ ಬಿಕ್ಕಟ್ಟು ಬಂದಿರುವುದು ಆತಂಕಕಾರಿಯಾಗಿದೆ. 2019-20ರ ಪರಿಷ್ಕೃತ ಅಂದಾಜಿನಂತೆ 1,77,255 ಕೋಟಿ ರೂ. ರಾಜಸ್ವ ಸ್ವೀಕೃತಿಯಲ್ಲಿ ಬದ್ಧತಾ ವೆಚ್ಚದ ಪಾಲು 1,55,191(ಶೇ.88) ಕೋಟಿ ರೂ. ಆಗಿದೆ. 2020-21ರ ಆಯವ್ಯಯದಲ್ಲಿ ಇದು ಶೇ.90 ದಾಟಲಿದೆ. 2013-14ರ ಅವಧಿಯಲ್ಲಿ ಬದ್ಧತಾ ವೆಚ್ಚವು ರಾಜಸ್ವ ಸ್ವೀಕೃತಿಯ ಶೇ.75ರ ಆಸುಪಾಸಿನಲ್ಲಿತ್ತು. ಕೇವಲ 6 ವರ್ಷದಲ್ಲಿ ಬದ್ಧತಾ ವೆಚ್ಚದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡಿದೆ. ಸಾಲುಸಾಲು ಜನಪ್ರಿಯ ಯೋಜನೆಗಳಿಗೆ ಒತ್ತು ಕೊಟ್ಟಿರುವುದು ಹಾಗೂ ತೆರಿಗೆ ಸೋರಿಕೆ ತಡೆಗೆ ಗಂಭೀರ ಕ್ರಮ ಕೈಗೊಳ್ಳದಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಮುಂದಿನ ಆತಂಕವೇನು? 2020-2024ರ ಅವಧಿಯ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಬದ್ಧತಾ ವೆಚ್ಚ ಶೇ.90ಕ್ಕೆ ತಲುಪಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಇಂತಹ ಸ್ಥಿತಿಯಲ್ಲಿ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ವಲಯಕ್ಕೆ ಬೃಹತ್‌ ಬಂಡವಾಳ ವೆಚ್ಚ ಭರಿಸುವುದು ಸವಾಲಿನಿಂದ ಕೂಡಿದೆ ಎಂಬ ಅಂಶವೂ ವಿತ್ತೀಯ ಯೋಜನೆಯಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಸಾಲ ತೆಗೆದುಕೊಳ್ಳುವುದು ಸುಲಭದ ಪರಿಹಾರವೆಂದು ಸರಕಾರ ಭಾವಿಸುತ್ತದೆ. ಇದೇ ಕಾರಣದಿಂದ 52,918 ಕೋಟಿ ರೂ. ಸಾಲ ಮಾಡುವುದಾಗಿ 2020-21 ವಿತ್ತ ವರ್ಷದ ಬಜೆಟ್‌ನಲ್ಲಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಪ್ರಸ್ತಾಪಿಸಿದ್ದಾರೆ. ಇದರೊಂದಿಗೆ 2020ರ ಮಾರ್ಚ್‌ ಅಂತ್ಯಕ್ಕೆ ರಾಜ್ಯ ಸರಕಾರದ ಒಟ್ಟು ಸಾಲದ ಮೊತ್ತ 3,68,692 ಕೋಟಿ ರೂ. ಆಗಲಿದೆ. ಹಾಗೆಯೇ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಾನದಂಡದ ಪರಿಧಿಯಲ್ಲೆ ಮುಂದಿನ 3 ಬಜೆಟ್‌ಗಳಲ್ಲಿ ಸಾಲ ಮಾಡಿದರೂ 2023-24ರ ಹೊತ್ತಿಗೆ ರಾಜ್ಯ ಸರಕಾರದ ಸಾಲದ ಮೊತ್ತ 5.65 ಲಕ್ಷ ಕೋಟಿ ರೂ. ದಾಟಲಿದೆ ಎಂದು ತಜ್ಞರು ಅಂದಾಜಿಸುತ್ತಾರೆ. ಇದರಿಂದ ರಾಜ್ಯದ ಆರ್ಥಿಕತೆಗೆ ಬಲವಾದ ಹೊಡೆತ ಬೀಳಲಿದೆ. ಕೊರೊನಾ ಪರಿಣಾಮದಿಂದ ಈ ಬಾರಿಯ ತೆರಿಗೆ ಸಂಗ್ರಹ ಪ್ರಕ್ರಿಯೆಗೂ ಹಿನ್ನಡೆಯಾಗಲಿದೆ.


from India & World News in Kannada | VK Polls https://ift.tt/2WDRGe9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...