ಚೆನ್ನೈ: ಸೋಂಕು ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಲೇ ಇದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ 19 ಸೋಂಕಿಗೆ ಸಂಬಂಧಪಟ್ಟಂತೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಬಿತ್ತರಿಸಲಾಗುತ್ತಿದೆ. ಜನರು ತಮ್ಮ ಅರಿವಿಗೆ ಬಾರದೆ ತಪ್ಪು ಮಾಹಿತಿಗಳನ್ನು ಇತರರಿಗೆ ಫಾರ್ವರ್ಡ್ ಮಾಡುತ್ತಿದ್ದಾರೆ. ಈ ನಡುವೆ ಎಚ್ಚೆತ್ತುಕೊಂಡಿರುವ ಭಾರತೀಯ ಕ್ರಿಕೆಟ್‌ನ ಸ್ಟಾರ್ ಆಲ್‌ರೌಂಡರ್ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳದಂತೆ ಮನವಿ ರವಾನಿಸಿದ್ದಾರೆ. "ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಸರಪಳಿಯನ್ನು ಮುರಿಯಲು ಸಮಾಜದಿಂದ ಪ್ರತ್ಯೇಕವಾಗಿ ಇರುವ ಅಗತ್ಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ವಿಶ್ವಾಸಾರ್ಹವಲ್ಲದ ಮಾಹಿತಿಯನ್ನು ಹರಡಬೇಡಿ. ಆರೋಗ್ಯ ಸಲಹೆಗಾರರನ್ನು ನಿರ್ಲಕ್ಷಿಸಬೇಡಿ ಮತ್ತು ಶುಚಿತ್ವ ಕ್ರಮಗಳನ್ನು ಖಂಡಿತವಾಗಿಯೂ ಅನುಸರಿಸಿ" ಎಂಬ ಸಂದೇಶ ರವಾನಿಸಿದ್ದಾರೆ. ಈ ಮೊದಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಸಹ ಸ್ಫೂರ್ತಿದಾಯಕ ಸಂದೇಶಗಳ ಮೂಲಕ ಕೊರೊನಾ ವೈರಸ್ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ವರ್ಷ ಶಸ್ತ್ರಚಿಕಿತ್ಸೆಗೊಳಾಗಿರುವ ರೈನಾ, ಗಾಯದಿಂದ ಸಂಪೂರ್ಣ ಚೇತರಿಕೆಯನ್ನು ಪಡೆದು ಐಪಿಎಲ್‌ನಲ್ಲಿ ಭರ್ಜರಿ ಪುನರಾಗಮನವನ್ನು ಎದುರು ನೋಡುತ್ತಿದ್ದಾರೆ. ಹಿಂದೊಮ್ಮೆ ಸಂದರ್ಶನದ ವೇಳೆಯಲ್ಲಿ ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಕಮ್‌ಬ್ಯಾಕ್ ಮಾಡಲು ಉತ್ಸುಕರಾಗಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರೈನಾ ಪಾಲಿಗೆ ಮಹತ್ವದೆನಿಸಿದೆ. ಮಾರ್ಚ್ ಮೊದಲ ವಾರದಿಂದಲೇ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಮಾಜಿ ನಾಯಕ ಹಾಗೂ ತಮ್ಮ ಆಪ್ತ ಗೆಳೆಯ ಮಹೇಂದ್ರ ಸಿಂಗ್ ಧೋನಿ ಜೊತೆಗೆ ಸುರೇಶ್ ರೈನಾ ತರಬೇತಿಯನ್ನು ಆರಂಭಿಸಿದ್ದರು. ಆದರೆ ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಸಿಎಸ್‌ಕೆ ಅಭ್ಯಾಸ ಅವಧಿಯನ್ನು ರದ್ದುಗೊಳಿಸಿದೆ. ಏತನ್ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಅಮಾನತಿನಲ್ಲಿಡಲಾಗಿದೆ. ಇದರಿಂದಾಗಿ ಈ ಬಾರಿ ಐಪಿಎಲ್ ಆಯೋಜನೆಯಾಗಬಹುದೇ ಎಂಬ ಬಗ್ಗೆ ಆತಂಕ ಮನೆ ಮಾಡಿದೆ. ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕೋವಿಡ್ 19 ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತರಬೇತಿ ಶಿಬಿರವನ್ನು ರದ್ದುಗೊಳಿಸಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2xKXxEf