ಹಕ್ಕಿಜ್ವರದ ಭೀತಿ, ಮಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿರುವ ಶ್ರೀರಾಮುಲು

ಮಂಗಳೂರು: ಕೊರೊನಾ ಸೋಂಕಿನ ಜೊತೆಗೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಕ್ಕಿಜ್ವರದ ಭೀತಿ ಕಾಣಿಸಿಕೊಂಡಿದ್ದು, ಆರೋಗ್ಯ ಸಚಿವ ಶ್ರೀರಾಮುಲು ಮಂಗಳೂರಿನಲ್ಲಿ ಮಂಗಳವಾರ ಪರಿಶೀಲನಾ ಸಭೆ ನಡೆಸಲಿದ್ದಾರೆ. ಕೇರಳದಲ್ಲಿ ತೀವ್ರಸ್ವರೂಪ ಪಡೆದುಕೊಳ್ಳುತ್ತಿದ್ದು ಕರಾವಳಿ ಜಿಲ್ಲೆಗಳಿಗೂ ಹರಡುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ವಿಭಾಗಮಟ್ಟದ ಅಧಿಕಾರಿಗಳ ಜೊತೆಗೆ ಸಚಿವ ಶ್ರೀರಾಮುಲು ಸಭೆಯನ್ನು ನಡೆಸಲಿದ್ದಾರೆ. ಕೇರಳ ಹಾಗೂ ಕರಾವಳಿ ಜಿಲ್ಲೆಗಳ ನಡುವೆ ವ್ಯಾಪಾರ ಸಂಪರ್ಕ ಹೆಚ್ಚಾಗಿದ್ದು, ಹಕ್ಕಿಜ್ವರದ ಹಿನ್ನೆಲೆಯಲ್ಲಿ ಕೆಲವೊಂದು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಸರಕು ಸಾಗಾಟದ ತಪಾಸಣೆ ಹಾಗೂ ಗಡಿಯಲ್ಲಿ ಕಣ್ಣಿಡಲು ಸೂಚಿಸಲಾಗಿದೆ. ಮೈಸೂರಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಎರಡು ಪಕ್ಷಿಗಳ ಸಾವಿಗೆ ಹಕ್ಕಿಜ್ವರವೇ ಕಾರಣ ಎಂದು ವೈದ್ಯಕೀಯ ಪರೀಕ್ಷೆಯಿಂದ ಈಗಾಗಲೇ ದೃಢಪಟ್ಟಿದೆ. ಪ್ರಕರಣ ಕಾಣಿಸಿಕೊಂಡ ಪ್ರದೇಶದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕೋಳಿಗಳು ಸೇರಿದಂತೆ ಎಲ್ಲ ಸಾಕು ಪಕ್ಷಿಗಳನ್ನು ಸಾಯಿಸಲು ನಿರ್ಧರಿಸಲಾಗಿದೆ. ಅಲ್ಲದೆ 10 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಕೋಳಿ ಸೇರಿದಂತೆ ಸಾಕು ಪಕ್ಷಿಗಳ ಮಾಂಸ, ಮೊಟ್ಟೆ ಮಾರಾಟವನ್ನು ನಿಷೇಧಿಸಲಾಗಿದೆ. ಹಕ್ಕಿಗಳಿಂದ ಮನುಷ್ಯನಿಗೆ ರೋಗ ಹರಡುವ ಸಾಧ್ಯತೆ ಕಡಿಮೆ ಇದ್ದರೂ ಮುಂಜಾಗರೂಕತಾ ಕ್ರಮವಾಗಿ ಆರೋಗ್ಯ ಇಲಾಖೆ ಕೆಲವೊಂದು ಎಚ್ಚರಿಕೆಯ ಹೆಜ್ಜೆಗಳನ್ನು ಇಟ್ಟಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಆರೋಗ್ಯ ಸಚಿವ ಶ್ರೀರಾಮುಲು ಮಂಗಳವಾರ ಸಭೆಯನ್ನು ನಡೆಸಿ ಕೈಗೊಂಡಿರುವ ಕ್ರಮಗಳ ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ.


from India & World News in Kannada | VK Polls https://ift.tt/2IQtX2e

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...