ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ 78ನೇ ಜನ್ಮದಿನದ ಅಂಗವಾಗಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಭಾಗಿಯಾಗಿರುವ ವಿಚಾರದಲ್ಲಿ ಕಾಂಗ್ರೆಸ್ನಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಪಷ್ಪಪಡಿಸಿದ್ದಾರೆ. ಫೆ. 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಎಸ್ವೈ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು ಬಿಎಸ್ವೈ ರಾಜಕೀಯ ಹಾದಿಯ ಬಗ್ಗೆ ಹಾಡಿ ಹೊಗಳಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ಭಾಗಿ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರಾಜಕೀಯವೇ ಬೇರೆ ವೈಯಕ್ತಿಯ ಸಂಬಂಧಗಳೇ ಬೇರೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ರಾಜಕೀಯ ವಿರೋಧಿ ಪಕ್ಷದ ನಾಯಕ ಬಿಎಸ್ವೈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದರು. ಯಡಿಯೂರಪ್ಪ ಜನ್ಮದಿನದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿ ವಿಚಾರ ಕಾಂಗ್ರೆಸ್ ಪಕ್ಷದೊಳಗೆ ಅಪಸ್ಪರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿತ್ತು. ಪಕ್ಷದ ಕೆಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ “ಮುಖ್ಯಮಂತ್ರಿ ಬಿಎಸ್ವೈ ಅವರ ಜನ್ಮದಿನಕ್ಕೆ ಸಿದ್ದರಾಮಯ್ಯ ಅವರು ಹೋಗಿ ಬಂದಿದ್ದಕ್ಕೆ ಕಾಂಗ್ರೆಸ್ನೊಳಗೆ ಯಾವುದೇ ಅಸಮಾಧಾನವಿಲ್ಲ. ರಾಜಕೀಯ ಬೇರೆ, ಮನುಷ್ಯ ಸಂಬಂಧಗಳು ಬೇರೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಹಾಗಾಗಿ, ಇದರ ಬಗ್ಗೆ ಯಾರಿಂದಲೂ ಅಪಸ್ವರವಿಲ್ಲ ಇದೆಲ್ಲಾ ಸುಳ್ಳಿ ಸುದ್ದಿ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.
from India & World News in Kannada | VK Polls https://ift.tt/2I8q48H