ಟೀಮ್ ಇಂಡಿಯಾದ ಕೆಟ್ಟ ಪ್ರದರ್ಶನಕ್ಕೆ ಬ್ಯಾಟ್ಸ್‌ಮನ್‌ಗಳನ್ನು ದೂರಲು ನಿರಾಕರಿಸಿದ ಬುಮ್ರಾ

ಕ್ರೈಸ್ಟ್‌ಚರ್ಚ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಬೌಲರ್‌ಗಳ ಅದ್ಭುತ ನಿರ್ವಹಣೆಯ ಹೊರತಾಗಿಯೂ ಬ್ಯಾಟ್ಸ್‌ಮನ್‌ಗಳ ಕೆಟ್ಟ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಮಗದೊಂದು ಸೋಲಿನ ಭೀತಿಗೊಳಗಾಗಿದೆ. ನ್ಯೂಜಿಲೆಂಡ್ ತಂಡವನ್ನು 235 ರನ್‌ಗಳಿಗೆ ಕಟ್ಟಿ ಹಾಕಿದ ಟೀಮ್ ಇಂಡಿಯಾ ಏಳು ರನ್‌ಗಳ ಅಂತರದ ಮುನ್ನಡೆ ಗಳಿಸಿತ್ತು. ಬಳಿಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡನೇ ದಿನದಂತ್ಯಕ್ಕೆ ಕೇವಲ 90 ರನ್ನಿಗೆ ಆರು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆ ಕೆಟ್ಟ ಪ್ರದರ್ಶನಕ್ಕೆ ಬ್ಯಾಟ್ಸ್‌ಮನ್‌ಗಳನ್ನು ದೂರಲು ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ನಿರಾಕರಿಸಿದರು. "ನೋಡಿ ಇನ್ನೊಬ್ಬರನ್ನು ದೂರುವುದು ನಮ್ಮ ಸಂಸ್ಕೃತಿಯಲ್ಲ. ಕ್ರೀಡೆಯು ಹೇಗೆ ನಿರ್ವಹಿಸುತ್ತದೆ ಎಂಬುದು ತಿಳಿದಿದೆ. ಕೆಲವೊಂದು ಬಾರಿ ಹೀಗಾಗುತ್ತದೆ. ಒಂದು ವೇಳೆ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿ ಬೌಲರ್‌ಗಳು ವಿಫಲವಾದರೆ ದೂರುವ ಸ್ವಾತಂತ್ರ್ಯವಿರುವುದಿಲ್ಲ. ಹಾಗೆಯೇ ನಾವೊಂದು ತಂಡವಾಗಿ ಕಠಿಣ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಿಜ, ನಾವು ಬಯಸಿದಕ್ಕಿಂತಲೂ ಹೆಚ್ಚಿನ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ. ಆದರೆ ಒಂದು ತಂಡವಾಗಿ ಒಬ್ಬರನ್ನೊಬ್ಬರನ್ನು ದೂರಲು ಇಷ್ಟಪಡುವುದಿಲ್ಲ" ಎಂದು ಬುಮ್ರಾ ತಿಳಿಸಿದರು. "ಒಂದು ಬೌಲಿಂಗ್ ಘಟಕವಾಗಿ ಮೊದಲ ದಿನವು ಉತ್ತಮ ದಾಳಿ ಸಂಘಟಿಸಿದ್ದೆವು. ಅನೇಕ ಅವಕಾಶಗಳನ್ನು ಸೃಷ್ಟಿ ಮಾಡಿದೆವು. ಆದರೆ ಅದೃಷ್ಟ ಸಾಥ್ ಕೊಡಲಿಲ್ಲ. ಎರಡನೇ ದಿನದಾಟದಲ್ಲೂ ಇದೇ ಪ್ರಕ್ರಿಯೆಯನ್ನು ಮುಂದುವರಿಸಿದೆವು. ನಾವು ಒತ್ತಡವನ್ನು ಹೇರುತ್ತಲೇ ಸಾಗಿದೆವು. ಯಾಕೆಂದರೆ ಎಲ್ಲರೂ ಒತ್ತಡವನ್ನು ಸೃಷ್ಟಿ ಮಾಡಿದರೆ ವಿಕೆಟ್ ಪಡೆಯಲು ಸಾಧ್ಯ ಎಂಬುದನ್ನು ಅರಿತಿದ್ದೆವು. ಇದರಂತೆ ಇಂದು ವಿಕೆಟ್ ಲಭಿಸಿದವು. ಈ ಬಗ್ಗೆ ಸಂತೋಷವಿದೆ" ಎಂದು ಸೇರಿಸಿದರು. "ತಂಡದ ಹಿರಿಯ ಸದಸ್ಯರಾಗಿ ನಾವು ಜವಾಬ್ದಾರಿ ವಹಿಸಬೇಕಿದೆ. ದೀರ್ಘ ಸ್ಪೆಲ್ ಮಾಡಲು ನಾವು ರೆಡಿಯಾಗಿದ್ದೇವೆ. ನಾನು ನನ್ನ ವೈಯಕ್ತಿಕ ಪ್ರದರ್ಶನದ ಬಗ್ಗೆ ಗಮನ ಹರಿಸುವುದಿಲ್ಲ. ನನ್ನ ಪೂರ್ವ ಸಿದ್ಧತೆ ಏನೆಂಬುದರ ಬಗ್ಗೆ ಗಮನ ಹರಿಸುತ್ತೇನೆ. ನನ್ನ ದೇಹಸ್ಥಿತಿ ಸಮರ್ಪಕವಾಗಿದ್ದು, ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಾದರೆ ವಿಕೆಟ್‌ಗಳು ಸಿಗಲಿದೆ ಎಂಬುದು ತಿಳಿದಿದೆ. ಇನ್ನು ಕೆಲವೊಮ್ಮೆ ಸಿಗಲಾರದು. ಆದರೆ ನನ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇನೆ. ನನ ಯೋಜನೆಗಳು ಸರಿಯಾಗಿದ್ದರೆ ಯಾವುದೇ ಸಮಸ್ಯೆಯಿಲ್ಲ" ಎಂದು ಭಾವಿಸಿದ್ದೇನೆ ಎಂದು ನುಡಿದರು. "ನಾನು ಯಾವತ್ತೂ ವೈಯಕ್ತಿಕ ನಿರ್ವಹಣೆ ಬಗ್ಗೆ ಗಮನ ಹರಿಸುವುದಿಲ್ಲ. ಏನೇ ಇದ್ದರೂ ನನ್ನ ಬೌಲಿಂಗ್ ಯೋಜನೆ ಜಾರಿಗೆ ತರಲು ಪ್ರಯತ್ನಿಸುತ್ತೇನೆ. ಕೆಲವೊಮ್ಮೆ ನನಗೆ ಇನ್ನು ಕೆಲವೊಮ್ಮೆ ಇತರೆ ಬೌಲರ್‌ಗಳಿಗೆ ವಿಕೆಟ್‌ಗಳು ಸಿಗಬಹುದು. ನನ್ನಿಂದ ಏನನ್ನು ನಿಯಂತ್ರಿಸಲು ಸಾಧ್ಯವೋ ಅದರ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ನನ್ನ ಯೋಜನೆ ಕಾರ್ಯಗತಗೊಳಿಸುವ ರೀತಿ ಹಾಗೂ ಮನೋಸ್ಥಿತಿ ಸರಿಯಿಲ್ಲದಿದ್ದರೆ ನನ್ನ ಬಗ್ಗೆ ಪ್ರಶ್ನೆ ಮಾಡಬಹುದಾಗಿದೆ. ನಾನು ಫಲಿತಾಂಶಗಳ ಬಗ್ಗೆ ಗಮನ ಕೇಂದ್ರಿಕರಿಸುವುದಿಲ್ಲ. ಈಗಾಗಲೇ ಹೇಳಿದಂತೆ ಯೋಜನೆ ಜಾರಿ ಮಾಡುವುದರಲ್ಲಿ ಗಮನ ಹರಿಸುತ್ತೇನೆ" ಎಂದರು. "ಇದು ಕ್ರೀಡೆಯಾಗಿದ್ದು, ಇಲ್ಲಿ ಯಶಸ್ಸಿಗೆ ನಿರ್ದಿಷ್ಟ ಹಾದಿಗಳಿಲ್ಲ. ಕೆಲವೊಮ್ಮೆ ಚೆಂಡು ಬ್ಯಾಟ್‌ಗೆ ಸವರಬಹುದು. ಇನ್ನು ಕೆಲವೊಮ್ಮೆ ಸವರದೇ ಹೋಗಬಹುದು. ಇದಕ್ಕಿಂತಲೂ ಕಠಿಣ ದಿನಗಳನ್ನು ನೋಡಿದ್ದೇನೆ. ಇವೆಲ್ಲವೂ ನನ್ನ ಪ್ರಯಾಣದ ಭಾಗವಾಗಿದೆ. ಇದರಿಂದ ಸಾಕಷ್ಟು ಕಲಿಯಲು ಸಾಧ್ಯವಾಗುತ್ತಿರುವುದರ ಬಗ್ಗೆ ಸಂತಸವಿದೆ" ಎಂದು ನುಡಿದರು. "ತಾಳ್ಮೆಯು ಎಲ್ಲರಿಗೂ ಬಹುಮುಖ್ಯವೆನಿಸುತ್ತದೆ. ಬ್ಯಾಟ್ಸ್‌ಮನ್, ಬೌಲರ್ ಅಥವಾ ಫೀಲ್ಡರ್ ಯಾರೆ ಆಗಿರಲಿ ತಾಳ್ಮೆ ಮುಖ್ಯವೆನಿಸುತ್ತದೆ. ಯಾಕೆಂದರೆ ಇದು ಟೆಸ್ಟ್ ಕ್ರಿಕೆಟ್‌ ಆಗಿದ್ದು, ತತ್‌ಕ್ಷಣ ಫಲಿಶಾಂಶ ಸಿಗಲಾರದು. ಕಠಿಣ ಪರಿಶ್ರಮ ವಹಿಸುತ್ತಲೇ ಇರಬೇಕು. ಪದೇ ಪದೇ ಪ್ರಯತ್ನಿಸುತ್ತಲೇ ಇರಬೇಕು. ಕೆಲವೊಂದು ಬಾರಿ ಹೆಚ್ಚು ಉತ್ಸಾಹಿತರಾಗಿ ಫಲಿತಾಂಶ ಸಿಗುತ್ತಿಲ್ಲವೆಂದು ಹತಾಶರಾಗಬಹುದು. ಈಗಲೇ ಫಲಿತಾಂಶ ಬೇಕು ಎಂದು ಅಂದುಕೊಂಡರೆ ಸಿಗಲಾರದು. ಟೆಸ್ಟ್ ಕ್ರಿಕೆಟ್ ಅನೇಕ ಅಂಶಗಳನ್ನು ಕಲಿಸಿಕೊಡುತ್ತದೆ. ನಾನು ಕೂಡಾ ಟೆಸ್ಟ್ ಕ್ರಿಕೆಟ್‌ನಿಂದ ಅನೇಕ ಅಂಶಗಳನ್ನು ಕಲಿತಿದ್ದೇನೆ. ದೀರ್ಘ ಕಾಲ ಆಡಬೇಕಾದರೆ ತಾಳ್ಮೆ ಅತಿ ಮುಖ್ಯ" ಎಂದು ವಿವರಿಸಿದರು. ಏತನ್ಮಧ್ಯೆ ಮೂರನೇ ದಿನದಾಟದಲ್ಲಿ ನಮ್ಮಿಂದ ಸಾಧ್ಯವಾದಷ್ಟು ರನ್ ಗಳಿಸಲು ಬಯಸುತ್ತೇವೆ ಎಂದು ಬುಮ್ರಾ ತಿಳಿಸಿದರು. "ನಿರ್ದಿಷ್ಟ ಗುರಿ ನಿಗದಿಪಡಿಸಿಲ್ಲ. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಾಧ್ಯವಾದಷ್ಟು ರನ್ ಗಳಿಸಲು ಯತ್ನಿಸಲಿದ್ದೇವೆ. ಅಲ್ಲಿಂದ ಬಳಿಕ ನೋಡೋಣ" ಎಂದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/32PlYMp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...