ಹೊಸದಿಲ್ಲಿ: ಮಹಾಮಾರಿ ಮಟ್ಟ ಹಾಕಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮರೋಪಾದಿಯಲ್ಲಿ ಯುದ್ಧ ಸಾರಿದೆ. ಬಹುತೇಕ ಇಡೀ ದೇಶವೇ ಲಾಕ್‌ಡೌನ್ ಆಗಿದ್ದು, ಜನರಲ್ಲಿ ಮನೆಯಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ. ಈ ನಡುವೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಕೊರೊನಾ ವೈರಸ್ ವಿರುದ್ಧ ಹೋರಾಡಲು ಅಗತ್ಯ ವಸ್ತುಗಳ ಖರೀದಿಗಾಗಿ ತಮ್ಮ ಸಂಸದ ನಿಧಿಯಿಂದ 50 ಲಕ್ಷ ರೂ.ಗಳ ನೆರವು ಘೋಷಿಸಿದ್ದಾರೆ. ಈ ಬಗ್ಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಪತ್ರವೊಂದನ್ನು ಬರೆದಿದ್ದಾರೆ. 'ನನ್ನ ಸಂಸದ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ನೆರವು ಮಾಡುವ ಪ್ರತಿಜ್ಞೆಯನ್ನು ಕೈಗೊಂಡಿದ್ದೇನೆ' ಎಂದು ಹೇಳಿದ್ದಾರೆ. 'ನನ್ನ ಕಚೇರಿಗೆ ಅವಶ್ಯಕತೆಗಳ ಬಗ್ಗೆ ತಿಳಿಸಲು ಉಸ್ತುವಾರಿ ಅಧಿಕಾರಿಗಳಿಗೆ ನಿರ್ದೇಶಿಸಿ. ಹಾಗೆಯೇ ಬೇರೆ ಯಾವುದೇ ಸಹಾಯ ಬೇಕಾದರೆ ದಯವಿಟ್ಟು ನನ್ನನ್ನು ತಿಳಿಸಿ' ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಗಂಭೀರ್, 'ಶಸ್ತ್ರಾಸ್ತ್ರಗಳಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವಿಲ್ಲ. ಕೊರೊನಾ ಚಿಕಿತ್ಸೆ ಹಾಗೂ ಅಗತ್ಯ ವಸ್ತುಗಳಲ್ಲಿ ಯಾವುದೇ ಕೊರತೆಯಾಗಬಾರದು. ಹಾಗಾಗಿ ಆಸ್ಪ್ರತ್ರೆಗಳಿಗೆ ನನ್ನ ಸಂಸದ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರೂ.ಗಳ ನೆರವು ಮಾಡಲು ಬಯಸುತ್ತೇನೆ' ಎಂದರು. ಇದೇ ಸಂದರ್ಭದಲ್ಲಿ ಜನರಲ್ಲಿ ಮನೆಯಲ್ಲೇ ಇರುವಂತೆಯೇ ಗಂಭೀರ ಕರೆ ನೀಡಿದರು. 'ಜಾಗರೂಕತೆ ಹಾಗೂ ಶುಚಿತ್ವವನ್ನು ಕಾಪಾಡಿ. ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿರಿ' ಎಂದರು. ಅಂದ ಹಾಗೆ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 468ಕ್ಕೆ ಏರಿಕೆಯಾಗಿದೆ. ಈ ಪೈಕಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಕೋವಿಡ್ 19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಜನರಲ್ಲಿ ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. ಸರಕಾರ ಹಾಗೂ ಆರೋಗ್ಯ ಇಲಾಖೆಯು ಕೊರೊನಾ ವೈರಸ್ ಸೋಂಕಿತರ ಆರೈಕೆ ಮಾಡುವುದರಲ್ಲಿ ತಲ್ಲೀನವಾಗಿದೆ. ಸೋಪ್ ಅಥವಾ ಸ್ಯಾನಿಟೈಸರ್ ಬಳಸಿ ಕೈ ತೊಳೆದು ಶುಚಿತ್ವ ಕಾಪಾಡಬೇಕು. ಶಂಕಿತರು ಕಡ್ಡಾಯವಾಗಿ 14 ದಿನಗಳ ಕಾಲ ಪ್ರತ್ಯೇಕವಾಗಿ ಇರಲು ಸೂಚನೆ ನೀಡಲಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3dp8n3e