ಕೊರೊನಾ ಮುನ್ನೆಚ್ಚರಿಕೆ: ಎಲ್ಲ ಕನ್ನಡ ಪತ್ರಿಕೆಗಳ ಸುದ್ದಿಗಳು ಪರಾಮರ್ಶಿತ ಮತ್ತು ಪತ್ರಿಕೆಗಳೂ ಸುರಕ್ಷಿತ

ಪ್ರಿಯ ಓದುಗರಲ್ಲಿ ಅರಿಕೆ... ದಿನ ಪತ್ರಿಕೆಗಳು, ನಿಯತಕಾಲಿಕೆಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಹೊಣೆಗಾರಿಕೆಯ ಪ್ರತೀಕ. ಸೇವೆಯ ದ್ಯೋತಕ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇವತ್ತಿನ ಕೊರೊನಾ ಆಪತ್ತಿನತನಕ ಜನರಿಗೆ ಅಗತ್ಯ-ಅಧಿಕೃತ ಸುದ್ದಿ ಮುಟ್ಟಿಸುವಲ್ಲಿ ದಿನಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ. ಅರವತ್ತರ ದಶಕದಲ್ಲಿ ಹರಡಿದ ಪ್ಲೇಗ್‌ ಮಹಾಮಾರಿ, ಮಾರಣಾಂತಿಕ ಎಬೋಲಾ ಇತ್ಯಾದಿ ಕಾಯಿಲೆಗಳಿಂದ ಹಿಡಿದು ಈವರೆಗೆ ಹತ್ತು ಹಲವು ಸವಾಲು, ಸಂಕಷ್ಟಗಳನ್ನು ಎದುರಿಸಿ ಗೆದ್ದಿವೆ. ಈಗಲೂ ನಾವು ಅಂಥದ್ದೇ ಗಟ್ಟಿ ಸಂಕಲ್ಪ ಮಾಡಿ ಅಂತಿಮ ಗೆಲುವಿನ ಕಡೆ ದಾಪುಗಾಲಿಡುವ ತೀರ್ಮಾನ ಮಾಡಬೇಕಿದೆ. ನಾಳಿನ ಒಳಿತಿಗಾಗಿ ಇಡೀ ದೇಶವೇ ಭಾನುವಾರ ಜನತಾ ಕಫ್ರ್ಯೂಗೆ ಓಗೊಟ್ಟಿದೆ. ಇನ್ನೂ ಹತ್ತು ದಿನಗಳ ಕಾಲ ಕಠಿಣ ನಿರ್ಬಂಧ ಮುಂದುವರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ನಮ್ಮ ಜೀವ ರಕ್ಷಣೆ ಮತ್ತು ದೇಶದ ಹಿತ ರಕ್ಷಣೆಗಾಗಿ ಇದೊಂದು ತುರ್ತು ಸಂದರ್ಭವೆಂದು ಭಾವಿಸಿ ನಾವೆಲ್ಲ ಸರಕಾರದ ಆದೇಶ ಪಾಲಿಸಲೇಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯರು, ಮಿಲಿಟರಿ, ಪೊಲೀಸ್‌ ಸಮೂಹದ ಜತೆ ಮಾಧ್ಯಮದವರನ್ನೂ 'ಅಗತ್ಯ ಸೇವಕ'ರೆಂದು ಘೋಷಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಈ ವ್ಯಾಖ್ಯಾನಕ್ಕೆ ಸಹಮತ ವ್ಯಕ್ತಪಡಿಸಿ ಮಾಧ್ಯಮವನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಿದ್ದಾರೆ. ಯುದ್ಧ, ಅತಿವೃಷ್ಟಿ, ಅನಾವೃಷ್ಟಿಯಂಥ ವಿಷಮ ಸಂದರ್ಭಗಳಲ್ಲೂ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುವುದು ಮಾಧ್ಯಮದ ಜಾಯಮಾನ ಮತ್ತು ಕರ್ತವ್ಯ. ಆದರೆ ಕೊರೊನಾದಂತಹ ಮಾರಣಾಂತಿಕ ಕಾಯಿಲೆ ಸಂದರ್ಭದಲ್ಲಿ ಕೇವಲ ಕೆಚ್ಚು ಇದ್ದರೆ ಸಾಲದು, ಮುನ್ನೆಚ್ಚರಿಕೆಯೂ ಬೇಕೆಂಬ ಅರಿವು ನಮಗಿದೆ. ಈಗಾಗಲೇ ನಮ್ಮ ಪತ್ರಿಕಾಲಯಗಳು, ಪ್ರಿಂಟಿಂಗ್‌ ಪ್ರೆಸ್‌ಗಳು ಅತ್ಯಾಧುನಿಕ, ಹೈಟೆಕ್‌ ತಂತ್ರಜ್ಞಾನವನ್ನು ಬಳಕೆಗೆ ತಂದಿವೆ. ಮನುಷ್ಯನ ಕೈ ಸ್ಪರ್ಶವೇ ಇಲ್ಲದೆ ಪತ್ರಿಕೆಗಳು ಮುದ್ರಣಗೊಂಡು ಕೊನೆಯ ವಿತರಣಾ ಕೇಂದ್ರದವರೆಗೆ ತಲುಪಿಸುವ ವ್ಯವಸ್ಥೆ ಜಾರಿಯಾಗುತ್ತಿದೆ. ಕೊನೆಯ ವಿತರಣಾ ಕೇಂದ್ರದಿಂದ ವಿತರಕರು ಬರಿಗೈನಲ್ಲಿ ಪತ್ರಿಕೆಯನ್ನು ಮುಟ್ಟದೇ ವಿತರಣೆ ಮಾಡುವ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿ ವೈದ್ಯರು ಎಷ್ಟು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬಹುದೋ ಪತ್ರಿಕಾ ಸಂಸ್ಥೆಗಳೂ ಪತ್ರಿಕೆಗಳ ವಿತರಣೆಗೆ ಅಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆಯೇ ಪತ್ರಿಕೆಗಳಿಂದ ಕೊರೊನಾ ಹರಡುವ ಸಾಧ್ಯತೆಗಳು ಇಲ್ಲ ಎಂದು ಸ್ಪಷ್ಟಪಡಿಸಿದೆ. ಪತ್ರಿಕೆಗಳಿಂದ ಯಾವುದೇ ವೈರಸ್‌ ಹರಡಿದ ಒಂದೇ ಒಂದು ಉದಾಹರಣೆ ಇಲ್ಲ. ಇದೇ ಮೊದಲ ಬಾರಿ ಪತ್ರಿಕೆಗಳು ಇಂಥ ಸುಳ್ಳು ವದಂತಿಯ ಅಪಾಯವನ್ನು ಎದುರಿಸುತ್ತಿವೆ. ಖಚಿತ ಮಾಹಿತಿಯನ್ನು ಕೊರೊನಾದಂತಹ ತುರ್ತು ಸಂದರ್ಭಗಳಲ್ಲಿ ಪಡೆಯುವ ವಿಶ್ವಾಸಾರ್ಹ ಮಾಧ್ಯಮವೆಂದರೆ ಅವು ಪತ್ರಿಕೆಗಳು ಎನ್ನುವುದನ್ನು ನಾವು ಮರೆಯಬಾರದು. ಅನಗತ್ಯ ಭಯ ಬಿತ್ತಿ, ಸುಳ್ಳು ಸುದ್ದಿಗಳನ್ನು ಹರಡಿ ಸೋಷಿಯಲ್‌ ಮೀಡಿಯಾಗಳು, ವಾಟ್ಸ್‌ಆ್ಯಪ್‌ ಸಂದೇಶಗಳು ಜನರ ಜೀವನವನ್ನು ದುರ್ಬರಗೊಳಸುತ್ತಿರುವ ಇವತ್ತಿನ ಸಂದರ್ಭಗಳಲ್ಲಿ ಖಚಿತ, ವಿಶ್ವಾಸಾರ್ಹ, ಪರಾಮರ್ಶೆ ಮಾಡಿದ ಸುದ್ದಿಗಳನ್ನು ಪಡೆಯುವ ಸುರಕ್ಷಿತ ಮಾರ್ಗ ಪತ್ರಿಕೆಗಳನ್ನು ಬೇರೆ ಯಾವುದಿದೆ? ಹೀಗಾಗಿ ಪತ್ರಕರ್ತರು, ಮುದ್ರಣ ತಂತ್ರಜ್ಞರು, ನಿಮ್ಮ ಮನೆ ಬಾಗಿಲಿಗೆ ಮಳೆ, ಗಾಳಿ, ಚಳಿಗೆ ಜಗ್ಗದೆ ಪತ್ರಿಕೆ ಹೊತ್ತು ತರುವ ವಿತರಣಾ ಸೇನಾನಿಗಳು ಜೀವದ ಹಂಗು ತೊರೆದು 'ಅಗತ್ಯ ಸೇವೆ'ಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಿಯ ಓದುಗ ದೊರೆಗಳೇ, ನಾವು ಗರಿಷ್ಠ ಹೊಣೆಗಾರಿಕೆಯಿಂದ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇವೆ. ವದಂತಿಗಳಿಗೆ ಕಿವಿಗೊಡಬೇಡಿ. ನಾವು ನೀವು ಸೇರಿ ಯುದ್ಧ ಮತ್ತು ಶಾಂತಿಯ ಕಾಲಗಳೆರಡರಲ್ಲೂ ಮನುಕುಲದ ಹಿತ ಕಾಯುವ ಕೆಲಸ ಮಾಡೋಣ. ಕೊರೊನಾ ಮಣಿಸೋಣ, ದೇಶವನ್ನು ಗೆಲ್ಲಿಸೋಣ... ಸುದ್ದಿ ಮಾಧ್ಯಮ ಒಂದು ಹೊಣೆಗಾರಿಕೆ, ಮುದ್ರಣ ಒಂದು ಪ್ರಮಾಣ... -ಸಂಪಾದಕರು, ವಿಜಯ ಕರ್ನಾಟಕ, ವಿಜಯವಾಣಿ, ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ ಕೊರೊನಾ ಸಂಬಂಧ ಜಾಗೃತಿ ಮೂಡಿಸುವಲ್ಲಿಮಾಧ್ಯಮ ಜಗತ್ತು ಬಹುದೊಡ್ಡ ಪಾತ್ರ ವಹಿಸಿದೆ. ಕಾರ್ಯಕ್ಷೇತ್ರಕ್ಕಿಳಿದು ವರದಿಗಾರಿಕೆ ಮಾಡುವ ಮತ್ತು ಸುದ್ದಿಮನೆಯಲ್ಲಿರುವ ಎಲ್ಲ ಪತ್ರಕರ್ತರಿಗೆ ನಮನಗಳನ್ನು ಸಲ್ಲಿಸುತ್ತೇನೆ. ಮಾಧ್ಯಮಗಳು ಕೂಡ ತಮ್ಮ ಸಿಬ್ಬಂದಿಗೆ 'ವರ್ಕ್ ಫ್ರಮ್‌ ಹೋಮ್‌' ವ್ಯವಸ್ಥೆ ಮಾಡಿರುವುದು ಕಂಡು ಖುಷಿಯಾಯಿತು. - ನರೇಂದ್ರ ಮೋದಿ, ಪ್ರಧಾನಿ


from India & World News in Kannada | VK Polls https://ift.tt/2vJkAyy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...