ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಐಪಿಎಲ್‌ 2020 ಆಯೋಜಿಸಲು ಬಿಸಿಸಿಐ ಕಸರತ್ತು!

ಬೆಂಗಳೂರು: ಕೊರೊನಾ ವೈರಸ್‌ ಭೀತಿ ಎಲ್ಲೆಡೆ ಆವರಿಸಿರುವ ಹಿನ್ನೆಲೆಯಲ್ಲಿ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಆಯೋಜಿಸುವುದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಾರ್ಚ್ 29ಕ್ಕೆ ಮುಂಬೈನಲ್ಲಿ ಶುರುವಾಗಬೇಕಿದ್ದ ಟೂರ್ನಿಯನ್ನು ಮುಂಜಾಗ್ರತಾ ಕ್ರಮವಾಗಿ ಸದ್ಯಕ್ಕೆ ಏಪ್ರಿಲ್ 15ಕ್ಕೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ, ಪರಿಸ್ಥಿತಿ ಸುಧಾರಣೆಯಾಗದೇ ಇದ್ದರೆ ಏಪ್ರಿಲ್‌ನಲ್ಲೂ ಟೂರ್ನಿ ಆಯೋಜಿಸಲು ಪರದಾಡುವ ಸಾಧ್ಯತೆ ಇದೆ. ಇದೇ ವೇಳೆ ಪಂದ್ಯಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕಡೆಗೂ ಬಿಸಿಸಿಐ ಎದುರು ನೋಡುತ್ತಿರುವುದಾಗಿ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ಫ್ರಾಂಚೈಸಿ ತಂಡಗಳ ಸಮ್ಮತಿ ಇಲ್ಲವಾಗಿದೆ. ಆಡಿಸಿದರೆ ಸಂಪೂರ್ಣ ಪಂದ್ಯಗಳನ್ನು ಆಡಿಸುವಂತೆ ಫ್ರಾಂಚೈಸಿಗಳು ಪಟ್ಟು ಹಿಡಿದಿವೆ ಎನ್ನಲಾಗುತ್ತಿದೆ. ಹೀಗಾಗಿ ಸಂಪೂರ್ಣ 60 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಈ ವರ್ಷ ಹೊಸ ಅವಧಿ ಕಂಡುಕೊಳ್ಳಬೇಕಿದೆ. ಇನ್ನು ಐಪಿಎಲ್‌ ರದ್ದು ಪಡಿಸುವ ಮಾತೇ ಇಲ್ಲ ಎನ್ನುತ್ತಿರುವ ಬಿಸಿಸಿಐ ಪ್ರಮುಖ ಆಟಗಾರರ ಅಲಭ್ಯತೆ ನಡುವೆಯೂ ಹೊಸ ವೇಳಾಪಟ್ಟಿಯಲ್ಲಿ ಟೂರ್ನಿಯನ್ನು ನಡೆಸುವ ಆಲೋಚನೆಯಲ್ಲಿದೆ ಎಂದು ವರದಿಯಾಗಿದೆ. 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೇವಲ 37 ದಿನಗಳಲ್ಲಿ ಟೂರ್ನಿ ನಡೆಸಲಾಗಿತ್ತು. ಹೀಗಾಗಿ ಅದೇ ರೀತಿಯಲ್ಲಿ ಭಾರತದಲ್ಲೇ ಜುಲೈ ಮತ್ತು ಸೆಪ್ಟೆಂಬರ್‌ ಅವಧಿಯಲ್ಲಿ ಎಲ್ಲಾ 60 ಪಂದ್ಯಗಳನ್ನು ನಡೆಸುವ ಯೋಜನೆ ರೂಪಿಸಲಾಗುತ್ತಿದೆ. ಆದರೆ, ಸೆಪ್ಟೆಂಬರ್‌ನಲ್ಲಿ ಯುಎಇ ಆತೀತ್ಯದಲ್ಲಿ ಏಷ್ಯಾ ಕಪ್‌ ಟಿ20 ಟೂರ್ನಿ ನಡೆಯಲಿದ್ದು, ಇದಕ್ಕೂ ಮೊದಲೇ ಐಪಿಎಲ್‌ ಮುಗಿಸುವ ಕೆಡೆಗೆ ಬಿಸಿಸಿಐ ಕಸರತ್ತು ನಡೆಸಿದೆ. ಇನ್ನು ಈ ಅವಧಿಯಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್‌ ನಡುವಣ ಸರಣಿಯಿದ್ದು, ಇಂಗ್ಲೆಂಡ್‌ ಆಟಗಾರರು ಐಪಿಎಲ್‌ಗೆ ಅಲಭ್ಯರಾಗಲಿದ್ದಾರೆ. ಆದರೆ, ಉಳಿದ ತಂಡಗಳ ವೇಳಾಪಟ್ಟಿ ಬಿಗಿ ಇಲ್ಲದೇ ಇರುವ ಕಾರಣ ವಿದೇಶಿ ಆಟಗಾರರ ಪಾಲ್ಗೊಳ್ಳುವಿಕೆ ಸಾಧ್ಯತೆ ಇದೆ. "2009ರಲ್ಲಿ ಐಪಿಎಲ್‌ ಟೂರ್ನಿಯನ್ನು 37 ದಿನಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. 5 ವಾರ 2 ದಿನದಲ್ಲಿ ಟೂರ್ನಿ ಮುಕ್ತಾಯ. ಈಗ ಅಂಥದ್ದೇ ಅವಧಿ ಲಭ್ಯವಾದರೆ ಐಪಿಎಲ್ ನಡೆಸಲು ಸಾಧ್ಯವಿದೆ. ಅಷ್ಟೇ ಅಲ್ಲದೆ ಟೂರ್ನಿಯನ್ನು ಅರ್ಧ ಭಾರತದಲ್ಲಿ ಅರ್ಧ ವಿದೇಶದಲ್ಲಿ ನಡೆಸಲು ಅವಕಾಶವಿದೆ. ಅಥವಾ ಸಂಪೂರ್ಣ ಟೂರ್ನಿಯನ್ನೇ ವಿದೇಶದಲ್ಲಿ ಆಡಿಸಲೂ ಬಹುದು," ಎಂದು ಬಿಸಿಸಿಐ ಮೂಲಗಳು ಟೈಮ್ಸ್‌ ಆಫ್‌ ಇಂಡಿಯಾಗೆ ಮಾಹಿತಿ ನೀಡಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/33tr6Ws

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...