ಹೊಸದಿಲ್ಲಿ: ಸಾಧನೆಗೆ ಅಡ್ಡದಾರಿಯಿಲ್ಲ ಎಂಬದನ್ನು ಮಗದೊಮ್ಮೆ ಸಾಬೀತು ಮಾಡಿರುವ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ , ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈ ಹಿಂದೆ ತಲಾ ಎರಡೆರಡು ಬಾರಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿರುವ ಸಿಂಧೂ, ಕೊನೆಗೂ ಅಚಲ ವಿಶ್ವಾಸದಿಂದ ಕಣಕ್ಕಿಳಿದು ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಕಳೆದೆರಡು ಬಾರಿ ಬೆಳ್ಳಿ ಪದಕ ಗೆದ್ದಿರುವ ಸಿಂಧೂ ಹ್ಯಾಟ್ರಿಕ್ ಫೈನಲ್ ಸಾಧನೆ ಮಾಡಿದ್ದರು. ಇದೀಗ ತಮ್ಮ ಸಾಮರ್ಥ್ಯವನ್ನು ಪ್ರಶ್ನಿಸಿದವರಿಗೆ ಇದುವೇ ನನ್ನ ಉತ್ತರ ಎಂದಿದ್ದಾರೆ. ಪದೇ ಪದೇ ನನ್ನ ವಿರುದ್ಧ ಪ್ರಶ್ನೆ ಎತ್ತುವವರಿಗೆ ನನ್ನ ರಾಕೆಟ್ ಮೂಲಕವೇ ಉತ್ತರ ನೀಡಲು ಬಯಸಿದ್ದೆ ಎಂದು ಸಿಂಧೂ ನುಡಿದರು. ಕಳೆದ ವರ್ಷವೂ ವಿಶ್ವ ಚಾಂಪಿಯನ್‌ಶಿಪ್ ಸೋತಾಗ ಅತೀವ ಬೇಸರ ಕಾಡಿತ್ತು. ಅಲ್ಲದೆ ಸಿಟ್ಟುಗೊಂಡಿದ್ದೆ. ಭಾವುಕಳಾದ ನಾನು ಈ ಒಂದು ಪಂದ್ಯವನ್ನು ಗೆಲ್ಲಲು ಏಕೆ ಸಾಧ್ಯವಿಲ್ಲ ಎಂದು ಯೋಚಿಸಿದ್ದೆ. ಆದರೆ ಕೊನೆಗೂ ಯಾವುದನ್ನು ಚಿಂತಿಸದೆ ನನ್ನ ಆಟವನ್ನು ಆಡಬೇಕು ಎಂಬದನ್ನು ಮನವರಿಕೆ ಮಾಡಿದೆ. ಅದಕ್ಕೀಗ ಫಲ ಸಂದಿದೆ ಎಂದರು. 2017ನೇ ಫೈನಲ್‌ನಲ್ಲಿ ನಜೊಮಿ ಒಕುಹರಾ ವಿರುದ್ಧ ಸಿಂಧೂ ಸೋಲನ್ನಪ್ಪಿದ್ದರು. ಇದೀಗ ಒಕುಹರಾ ಅವರನ್ನೇ ಮಣಿಸಿರುವ ಸಿಂಧೂ ಸೇಡು ತೀರಿಸಿಕೊಂಡರು. ಏತನ್ಮಧ್ಯೆ ಚಿನ್ನದ ಪದಕವನ್ನು ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ತಾಯಿಗೆ ಅರ್ಪಿಸಿದ್ದಾರೆ. ಅದೇ ಹೊತ್ತಿಗೆ ಮುಂದಿನ ವರ್ಷ ನಡೆಲಿರುವ ಒಲಿಂಪಿಕ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲದರ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಮಾಜಿ ಒಲಿಂಪಿಕ್ ಚಾಂಪಿಯನ್ ಜಾಂಗ್ ನಿಂಗ್ ದಾಖಲೆಯನ್ನು ಸಿಂಧೂ ಸರಿಗಟ್ಟಿದ್ದಾರೆ. ಜಾಂಗ್ ನಿಂಗ್ ಕೂಡಾ ಒಂದು ಚಿನ್ನ ಹಾಗೂ ತಲಾ ಎರಡು ಬೆಳ್ಳಿ ಹಾಗೂ ಕಂಚಿನ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3239X41