ಪುತ್ತೂರು: ಮಂಜೇಶ್ಚರ - ಸುಬ್ರಹ್ಮಣ್ಯ ಅಂತಾರಾಜ್ಯ ರಸ್ತೆಯಲ್ಲಿ - ಸವಣೂರು ನಡುವಿನ ಮಾಂತೂರು ಎಂಬಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಕಾಲೇಜ್ ವಿದ್ಯಾರ್ಥಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಪುತ್ತೂರು ನಗರದಿಂದ 15 ಕಿ.ಮೀ. ದೂರದಲ್ಲಿರುವ ಮಾಂತೂರಿನಲ್ಲಿ ಬೈಕ್ ಅಪಘಾತಗೊಂಡು ಈ ದುರ್ಘಟನೆ ಸಂಭವಿಸಿದ್ದು, ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಚೇತನ್ ಅಸುನೀಗಿದ್ದಾರೆ. ಬೈಕ್‌ನಲ್ಲಿದ್ದ ಇನ್ನೊಬ್ಬ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರ ಪೇಟೆ ನಿವಾಸಿ ಬೋಜಪ್ಪ, ಉಮಾವತಿ ದಂಪತಿ ಪುತ್ರರಾದ ಚೇತನ್ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪುತ್ತೂರಿನಲ್ಲಿ ಪಿ.ಜಿ. ಯಲ್ಲಿ ವಾಸವಾಗಿದ್ದರು. ಅವರ ಸ್ನೇಹಿತ, ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಸುದೀಪ್ ಅವರ ಜತೆ ಚೇತನ್ ಭಾನುವಾರ ಮಾಣಿ ಸಮೀಪದ ಸಾದಿಕುಕ್ಕು ಜಾತ್ರೆಗೆ ಹೋಗಿದ್ದರು. ರಾತ್ರಿ ಅಲ್ಲಿಂದ ಪುತ್ತೂರಿಗೆ ಬಂದು ಬೈಕ್ ನಲ್ಲಿ ಬೆಳ್ಳಾರೆಯ ಸುದೀಪ್ ಮನೆಗೆ ಇಬ್ಬರೂ ಹೋಗುತ್ತಿದ್ದರು. ಈ ವೇಳೆ ಮಾಂತೂರಿನಲ್ಲಿ ಬೈಕ್ ಅಪಘಾತಕ್ಕೀಡಾಗಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಆಟೋ ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತರಲಾಯಿತಾದರೂ ಚೇತನ್ ಮೃತಪಟ್ಟಿದ್ದು, ಸುದೀಪ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
from India & World News in Kannada | VK Polls https://ift.tt/3tJgdf8