
ಕಾರವಾರ: ಗೋವಾದ ರಸ್ತೆ ಸಾರಿಗೆ ಸಂಸ್ಥೆ ಕದಂಬಾ ಟ್ರಾನ್ಸ್‌ಪೊರ್ಟೇಶನ್ ವತಿಯಿಂದ ಕಾರವಾರ-ಮಡಗಾಂವ ನಡುವೆ ಬ್ಯಾಟರಿ ಚಾಲಿತ ಬಸ್ ಸಂಚಾರ ಶುಕ್ರವಾರದಿಂದ ಪ್ರಾಯೋಗಿಕವಾಗಿ ಆರಂಭವಾಗಿದೆ. ಸಂಪೂರ್ಣ ಏರ್ ಕಂಡಿಷನ್ ವ್ಯವಸ್ಥೆ ಇರುವ ಈ ಬಸ್ 12 ಮೀಟರ್ ಉದ್ದವಾಗಿದ್ದು 48 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಬಸ್‌ನ ಮುಂಭಾಗ ಹಾಗೂ ಹಿಂಭಾಗದಲ್ಲಿಎಲೆಕ್ಟ್ರಾನಿಕ್ ಕಂಟ್ರೋಲ್ ವ್ಯವಸ್ಥೆ ಹೊಂದಿದ್ದು, ಸಿಸಿ ಟಿವಿ ಸೌಲಭ್ಯವಿದೆ. ವಿಶೇಷಚೇತನರಿಗಾಗಿ ಗಾಲಿ ಕುರ್ಚಿ ಮೂಲಕ ಬಸ್ ಹತ್ತುವ ಹಾಗೂ ಇಳಿಯುವ ವ್ಯವಸ್ಥೆ ಇದರಲ್ಲಿದೆ. ಡಿಸ್ಕ್ ಬ್ರೇಕ್, ಜಿಪಿಎಸ್ ವ್ಯವಸ್ಥೆ, ಲಾಕ್ ಬ್ರೇಕಿಂಗ್ ವಿರೋಧಿ ವ್ಯವಸ್ಥೆ, ತುರ್ತು ಸೇವಾ ಬಟನ್, ಯುಎಸ್‌ಬಿ ಸಾಕೆಟ್ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಈ ಬಸ್‌ನಲ್ಲಿ ಕಲ್ಪಿಸಲಾಗಿದೆ. ಮೊಬೈಲ್‌ಗಳಲ್ಲಿ ಉಪಯೋಗಿಸುವ ಲೀಥಿಯಂ ಐಯಾನ್ ಬ್ಯಾಟರಿ ತಂತ್ರಜ್ಞಾನವನ್ನು ಈ ಬಸ್‌ನಲ್ಲಿಉಪಯೋಗಿಸಲಾಗುತ್ತಿದ್ದು, ನಾಲ್ಕು ಗಂಟೆಗಳ ಕಾಲ ಚಾರ್ಚ್ ಮಾಡಿದರೆ 200-250 ಕಿ.ಮೀ. ಅಂತರವನ್ನು ಬಸ್ ಸಂಚರಿಸುತ್ತದೆ. ಈ ಬಸ್‌ನ ಇನ್ನೊಂದು ವೈಶಿಷ್ಟವೆಂದರೆ ಬ್ರೇಕ್ ಹಾಕಿದಾಗ ಇದರಲ್ಲಿ ಚಲನಾಶಕ್ತಿಯನ್ನು ಮರುಉತ್ಪಾದನೆ ಮಾಡುವ ಸಾಮರ್ಥ್ಯವಿದ್ದು, ಅದರಿಂದ ಬ್ಯಾಟರಿಯನ್ನು ದೀರ್ಘಕಾಲ ಉಪಯೋಗಿಸಬಹುದಾಗಿದೆ ಎಂದು ಸಂಸ್ಥೆ ಹೇಳಿದೆ.
from India & World News in Kannada | VK Polls https://ift.tt/3ruc1yu