: ದಕ್ಷಿಣ ಕನ್ನಡ ಜಿಲ್ಲೆಯ ಅವಿಭಜಿತ ಪುತ್ತೂರು ತಾಲೂಕಿನ ಇಬ್ಬರು ತರುಣಿಯರು ದೇಶ ಸೇವೆಯ ಕಾರ್ಯಕ್ಕೆ ಮುಂದಾಗಿದ್ದು, ಗಡಿಭದ್ರತಾ ಪಡೆ (ಬಿಎಸ್ಎಫ್)ಗೆ ಆಯ್ಕೆಯಾಗಿದ್ದಾರೆ. ಪುತ್ತೂರು ಹೊರವಲಯದ ಬಲ್ನಾಡಿನ ಪರಜಾಲ್ ದೇವಸ್ಯದ ರಮ್ಯಾ ಮತ್ತು ಕಡಬ ತಾಲೂಕು ವ್ಯಾಪ್ತಿಯ ಕಾಣಿಯೂರಿನ ಯೋಗಿತಾ ಅವರೇ ಗಡಿ ಭದ್ರತಾ ಪಡೆಗೆ ಆಯ್ಕೆಯಾಗಿರುವ ಧೀರ ವನಿತೆಯರು. ಇವರಿಬ್ಬರೂ ಏಪ್ರಿಲ್ 1ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ರಮ್ಯಾ ಅವರು ಬಲ್ನಾಡಿನ ಪದ್ಮಯ್ಯ ಗೌಡ ಮತ್ತು ತೇಜವತಿ ದಂಪತಿಗಳ ಪುತ್ರಿ. ಬಲ್ನಾಡ್ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಈಕೆ, ಪುತ್ತೂರು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣ ಪಡೆದಿದ್ದು, ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಶಾಲಾ ದಿನಗಳಲ್ಲಿ ಎನ್ಸಿಸಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ರಮ್ಯಾ, ಇದೀಗ ಸೇನಾ ಕರ್ತವ್ಯಕ್ಕೆ ಹೊರಟು ನಿಂತಿದ್ದಾರೆ. ಕಾಣಿಯೂರು ಗ್ರಾಮದ ಮಲೆಕೆರ್ಚಿ ಮೇದಪ್ಪ ಗೌಡ ಮತ್ತು ದೇವಕಿ ದಂಪತಿಗಳ ಪುತ್ರಿಯಾದ ಯೋಗಿತಾ ಎಂ. ಬೊಬ್ಬೆಕೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಕಾಣಿಯೂರಿನಲ್ಲಿ ಪ್ರೌಢಶಿಕ್ಷಣ, ನಿಂತಿಕಲ್ನಲ್ಲಿ ಪಿಯು ಶಿಕ್ಷಣ ಪಡೆದಿದ್ದಾರೆ. ಮಂಗಳೂರಿನ ವಿವಿ ಕಾಲೇಜಿನಲ್ಲಿ ಪದವಿ ಪಡೆದು, ಕೊಣಾಜೆಯ ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆದಿದ್ದಾರೆ. ಮಾರ್ಚ್ 30ರಂದು ಕಾಣಿಯೂರಿನಲ್ಲಿ ಯೋಗಿತಾಳಿಗೆ ಗ್ರಾಮಸ್ಥರಿಂದ ಗೌರವಾರ್ಪಣೆ ಮತ್ತು ಬೀಳ್ಕೊಡುಗೆ ನಡೆಯಲಿದೆ. ಒಂದೇ ತಾಲೂಕಿನ ಇಬ್ಬರು ಯುವತಿಯರು ಸೇನೆಗೆ ಸೇರುತ್ತಿರುವ ಹಿನ್ನೆಲೆ ಊರಲ್ಲಿ ಸಂಭ್ರಮ ಮನೆಮಾಡಿದ್ದು, ಅವರ ಬಗ್ಗೆ ಸಾರ್ವಜನಿಕರು ಕೊಂಡಾಡುತ್ತಿದ್ದಾರೆ.
from India & World News in Kannada | VK Polls https://ift.tt/2PhCiD8