ಬೆಂಗಳೂರು: ನಿರೀಕ್ಷೆಯಂತೆಯೇ ಉಭಯ ಸದನಗಳಲ್ಲಿ ಮಾಜಿ ಸಚಿವ ಸಿ.ಡಿ. ಪ್ರಕರಣವನ್ನು ಮುಂದಿಟ್ಟುಕೊಂಡು ಧರಣಿ ಮುಂದುವರೆಸಲು ಕಾಂಗ್ರೆಸ್ ನಿರ್ಧರಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗಾಗಿ ಆಗ್ರಹಿಸಿ ಉಭಯ ಸದನಗಳಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಿ.ಡಿ ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯಿಸುವ ಪಕ್ಷದ ನಿರ್ಣಯಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದರು. ನಿನ್ನೆ(ಮಾ.22-ಸೋಮವಾರ) ವಿಧಾನಸಭೆಯಲ್ಲಿ ರಮೇಶ್ ಜಾರಕಿಹೊಳಿ ಸಿ.ಡಿ ವಿಚಾರವಾಗಿ ಸುದೀರ್ಘವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ ಜಾರಕಿಹೊಳಿ ಸಿ.ಡಿ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಸಬೇಕು ಎಂದು ಒತ್ತಾಯಿಸಿ, ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಫಲವಾಗಿ ಸ್ಪೀಕರ್ ಕಾಗೇರಿ ಕಲಾಪವನ್ನು ಮುಂದೂಡಿದ್ದರು. ಆದರೆ ಇಂದೂ(ಮಾ.23-ಮಂಗಳವಾರ) ಕೂಡ ಸಿ.ಡಿ ವಿಚಾರವಾಗಿ ಉಭಯ ಸದನಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲು ನಿರ್ಧರಿಸುವುದು ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕರಾದ ಎಸ್‌ಆರ್ ಪಾಟೀಲ್, ದಿನೇಶ್ ಗುಂಡೂರಾವ್, ಈಶ್ವರ್ ಖಮಡ್ರೆ, ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
from India & World News in Kannada | VK Polls https://ift.tt/3lShgXL