ಕೋಲ್ಕತ್ತಾ: 'ಅಪ್ಪಾ ಐ ಲವ್ ಯೂ ಪಾ..'ಅಂತಾ ಹಾಡಬೇಕಿದ್ದ 22 ವರ್ಷದ ಮಗಳು, ತನ್ನ ತಂದೆಯನ್ನೇ ಬೆಂಕಿ ಹಚ್ಚಿ ನಿರ್ದಯವಾಗಿ ಕೊಲೆ ಮಾಡಿದ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದಿದೆ. ಹೌದು, ತಂದೆಯನ್ನು ಊಟಕ್ಕೆಂದು ಹೊರಗೆ ಕರೆದುಕೊಂಡು ಹೋದ ಪುತ್ರಿ, ಆತನಿಗೆ ಮದ್ಯ ಕುಡಿಸಿ ನದಿ ದಡಕ್ಕೆ ಕರೆದುಕೊಂಡು ಬಂದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ. ಇಲ್ಲಿನ ಚಾಡಪಲ್ ಘಾಟ್ ಬಳಿ ತಂದೆಯನ್ನು ಜೀವಂತವಾಗಿ ದಹಿಸಿದ ಮಗಳನ್ನು ಪೊಲೀಸರು ಬಂಧಿಸಿದ್ದು, ತಂದೆಯನ್ನು ಕೊಲೆ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಪೊಲೀಸ್ ವಿಚಾರಣೆ ವೇಳೆ ತನ್ನ ತಂದೆಯ ಕರಾಳ ಮುಖವನ್ನು ಬಿಚ್ಚಿಟ್ಟಿರುವ ಯುವತಿ, ತಾಯಿ ತೀರಿ ಹೋದ ಮೇಲೆತಂದೆ ನನಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದ. ನನ್ನ ಮದುವೆಯಾದ ಬಳಿಕ ಆತನ ಕ್ರೌರ್ಯದಿಂದ ಮುಕ್ತಿ ಪಡೆದೆ. ಆದರೆ ಸಾಂಸಾರಿಕ ಕಾರಣದಿಂದ ಪತಿಯಿಂದ ವಿಚ್ಛೇದನ ಪಡೆದು ಮರಳಿ ಮನೆಗೆ ಬಂದ ಮೇಲೆ ತಂದೆ ಮತ್ತೆ ಹಿಂಸಿಸಲು ಆರಂಭಿಸಿದ್ದ ಎಂದು ಹೇಳಿದ್ದಾಳೆ. ಇದೇ ಕಾರಣಕ್ಕೆ ಆತನ ಕೊಲೆ ಮಾಡಲು ನಿರ್ಧರಿಸಿ ಕಳೆದ ಭಾನುವಾರ(ಮಾ.22) ಹೂಗಲಿ ನದಿ ದಡದ ಬಳಿ ಬೆಂಕಿ ಹಚ್ಚಿ ಆತನನ್ನು ಕೊಲೆ ಮಾಡಿದ್ದಾಗಿ ಯುವತಿ ಸತ್ಯ ಒಪ್ಪಿಕೊಂಡಿದ್ದಾಳೆ. ಯುವತಿಯ ಈ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾನು ತಂದೆಯನ್ನು ಕೊಂದಿರುವುದು ನಿಜವಾದರೂ, ಆತನ ಕೌರ್ಯದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಯುವತಿ ಪೊಲೀಸರ ಮುಂದೆ ಅಲವತ್ತುಕೊಂಡಿದ್ದಾಳೆ.
from India & World News in Kannada | VK Polls https://ift.tt/3f6Dofy