
ಬೆಂಗಳೂರು: ಎರಡು ಪ್ರತ್ಯೇಕ ಕೊಲೆ ಪ್ರಕರಣದ ಆರೋಪಿಗಳಿಗಾಗಿ ಹುಡುಕಾಟಕ್ಕಾಗಿ ನಡೆಸುತ್ತಿದ್ದ ಜಿಲ್ಲೆಯ ಚನ್ನರಾಯಪಟ್ಟಣ ಪಿಎಸ್ಐ ಕಿರಣ್ ಕುಮಾರ್ ಆತ್ಮಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದೆ. ಕಿರಣ್ ಕುಮಾರ್ ಆತ್ಮಹತ್ಯೆಗೆ ರಾಜಕೀಯ ಒತ್ತಡವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿರುವ ಮಧ್ಯೆಯೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ತಕ್ಷಣವೇ ಆದೇಶಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಕರಣದ ಕುರಿತಾಗಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಪೊಲೀಸರು ಮತ್ತು ಹಿರಿಯ ಪೊಲೀಸ್ ಸಿಬ್ಬಂದಿ ಜೀವದ ಹಂಗು ತೊರೆದು ಹೋರಾಟ ಮಾಡುವ ಪರಿಸ್ಥಿತಿಯಲ್ಲಿ ಅವರ ಆತ್ಮಾಭಿಮಾನ, ಸ್ವಾಭಿಮಾನಕ್ಕೆ ಧಕ್ಕೆ ತರುವಂತೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದೇ ಪಿಎಸ್ಐ ಆತ್ಮಹತ್ಯೆಗೆ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೀಗಾಗಿ ಸೂಕ್ತ ತನಿಖೆಗೆ ಆದೇಶಿಸುವ ಮೂಲಕ ಕಿರಿಯ ಹಂತದ ಪೊಲೀಸ್ ಅಧಿಕಾರಿಗಳಲ್ಲಿ ನೈತಿಕ, ಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಬಿಜೆಪಿಯ ವಿರುದ್ಧವೂ ಕಿಡಿಕಾರಿದ್ದು, ಈ ಹಿಂದೆ ಹಿಂದೆ ಗಣಪತಿ ಭಟ್, ಮಲ್ಲಿಕಾರ್ಜುನ ಬಂಡೆ, ಕಲ್ಲಪ್ಪ ಹಂಡಿಬಾಗ್ ಅವರ ಅಕಾಲಿಕ ಸಾವು ಮತ್ತು ಅನುಪಮಾ ಶೆಣೈ ಅವರ ರಾಜೀನಾಮೆ ವೇಳೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯಾದ್ಯಂತ ‘ಜಾಗಟೆ’ ಬಾರಿಸಿದ್ದ ಈಗ ಮೌನಕ್ಕೆ ಶರಣಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆತ್ಮಹತ್ಯೆ ಮಾಡಿಕೊಂಡ ಕಿರಣ್ ಕುಮಾರ್ ಅವರ ಮೊಬೈಲ್ ಫೋನನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿರೋದು ಹಲವು ಶಂಕೆಗಳಿಗೆ ಎಡೆಮಾಡಿಕೊಟ್ಟಿದೆ. ಇವರ ಸಾವಿಗೆ ಆಯಕಟ್ಟಿನ ಜಾಗದಲ್ಲಿ ಕುಳಿತ ಹಿರಿಯ ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಹಾಗೂ ಬೆದರಿಕೆ ತಂತ್ರ ಕಾರಣ ಎಂಬ ಮಾಹಿತಿ ನನಗಿದೆ ಎಂದು ತಿಳಿಸಿದ್ದಾರೆ. ಇನ್ನು ಬೇರೆ ಪಕ್ಷಗಳ ಆಡಳಿತಾವಧಿಯಲ್ಲಿ ಅಧಿಕಾರಿಗಳ ನಿಗೂಢ ಸಾವಿಗೆ ಸರ್ಕಾರವೇ ಕಾರಣ ಎಂದು ಬೊಬ್ಬೆ ಹಾಕಿದ್ದ ಬಿಜೆಪಿ ವರ್ಷದಿಂದ ಆಡಳಿತ ಚುಕ್ಕಾಣಿ ಹಿಡಿದಿದೆ ಎಂದಿರುವ ಹೆಚ್‌ಡಿಕೆ, ಈಗ ಪಿ.ಎಸ್.ಐ, ಇದಕ್ಕೂ ಮುನ್ನ ಐಎಎಸ್ ಅಧಿಕಾರಿ, ಕಳೆದ ವರ್ಷ ಐ.ಎಫ್.ಎಸ್. ಅಧಿಕಾರಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸರ್ಕಾರ ದಿವ್ಯ ಮೌನಕ್ಕೆ ಶರಣಾಗಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಈ ಹಿಂದೆ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾದಾಗ ನ್ಯಾಯ ಸಮ್ಮತ ತನಿಖೆಗೆ ಒತ್ತಡ ಹೇರುತ್ತಿದ್ದ ಬಿಜೆಪಿ, ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ತಕ್ಷಣ ಆದೇಶ ನೀಡಬೇಕು. ಯಾವುದೇ ಇಲಾಖೆಯಲ್ಲಿಯೂ ಪ್ರಾಮಾಣಿಕ ಅಧಿಕಾರಿಗಳು ಕಿರುಕುಳಕ್ಕೆ ಒಳಗಾಗದಂತೆ ಎಚ್ಚರವಹಿಸಬೇಕು ಎಂದು ಆಗ್ರಹಿಸಿದ್ದಾರೆ.
from India & World News in Kannada | VK Polls https://ift.tt/3jX4iq6