ಕ್ವಾರಂಟೈನ್‌ನಲ್ಲಿದ್ದ ಶಾಲೆಯನ್ನು ಪೇಂಟ್ ಮಾಡಿ ಸುಂದರವಾಗಿಸಿದ ವಲಸೆ ಕಾರ್ಮಿಕರು!

ಸಿಕರ್: ಕ್ವಾರಂಟೈನ್‌ಗೆ ಬನ್ನಿ ಎಂದು ಮನವಿ ಮಾಡಿದರೆ ದಾಳಿ ಮಾಡುವ ಜನ ಒಂದು ಕಡೆ, ತಮ್ಮನ್ನು ಕ್ವಾರಂಟೈನ್‌ಗೆ ಗುರಿಪಡಿಸಿದ ಶಾಲೆಯನ್ನೇ ದುರಸ್ತಿ ಮಾಡಿ ಅದನ್ನು ಸುಂದರವಾಗಿಸಿದ ಜನ ಮತ್ತೊಂದೆಡೆ. ಹೌದು, ತಮ್ಮನ್ನು ಕ್ವಾರಂಟೈನ್‌ಗೆ ಗುರಿಪಡಿಸಿದ ಶಾಲೆಯ ಗೋಡೆಗಳಿಗೆ ಪೇಂಟ್ ಮಾಡಿದ್ದಲ್ಲದೇ. ದುರಸ್ತಿ ಕಾರ್ಯವನ್ನೂ ಪೂರ್ಣಗೊಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜಸ್ಥಾನದ ಸಿಕರ್‌ನ ಎರಡು ಸರ್ಕಾರಿ ಶಾಲೆಗಳಲ್ಲಿ ಹರಿಯಾಣ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ಸುಮಾರು 54 ವಲಸೆ ಕಾರ್ಮಿಕರನ್ನು ಕ್ವಾರಂಟೈನ್‌ಗೆ ಗುರಿಪಡಿಸಲಾಗಿದೆ. ನಿರ್ದಿಷ್ಟ ಚಿಕಿತ್ಸಾ ಪ್ರಕ್ರಿಯೆ ಬಳಿಕ ಉಳಿಯುವ ಸಮಯನ್ನು ಈ ಕಾರ್ಮಿಕರು ತಾವು ತಂಗಿರುವ ಶಾಲೆಯ ಅಂದವನ್ನು ಹೆಚ್ಚಿಸಲು ಬಳಸಿಕೊಂಡಿದ್ದಾರೆ. ಸುತ್ತಮುತ್ತಲಿನ ಹಳ್ಳಿಗಳಿಂದ ಸುಣ್ಣ ಮತ್ತು ಬಣ್ಣಗಳನ್ನು ತರಿಸಿದ ವಲಸೆ ಕಾರ್ಮಿಕರು, ತಮ್ಮ ಬಿಡುವಿನ ವೇಳೆ ಒಟ್ಟಾಗಿ ಶಾಲೆಯ ಗೋಡೆಗಳಿಗೆ ಹಚ್ಚಿ ಅದಕ್ಕೆ ಹೊಸ ರೂಪ ನೀಡಿದ್ದಾರೆ. ಅಲ್ಲದೇ ಶೌಚಾಲಯ, ತರಗತಿ ಕೊಠಡಿಗಳನ್ನು ದುರಸ್ತಿ ಮಾಡಿ ಸ್ವಚ್ಛಗೊಳಿಸಿದ್ದಾರೆ. ತಮ್ಮ ಆರೋಗ್ಯದ ಕಡೆಗೆ ಗಮನಹರಿಸಿರುವ ವೈದ್ಯಕೀಯ ಸಿಬ್ಬಂದಿ ಹಾಗೂ ತಮಗೆ ಊಟ ನೀಡಿದ ಸ್ಥಳೀಯರ ಸಹಾಯಕ್ಕೆ ಪ್ರತಿಯಾಗಿ ತಾವು ತಂಗಿರುವ ಶಾಲೆಯನ್ನು ತಮ್ಮದೇ ಖರ್ಚಿನಲ್ಲಿ ಈ ವಲಸೆ ಕಾರ್ಮಿಕರು ದುರಸ್ತಿಗೊಳಿಸಿದ್ದಾರೆ. ತಾವು ತಂಗಿರುವ ಶಾಲೆಯ ಆವರಣಕ್ಕೆ ವಲಸೆ ಕಾರ್ಮಿಕರು ಹೊಸ ರೂಪ ನೀಡಿದ ಫೋಟೋವನ್ನು ಭಾರತೀಯ ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾರ್ಮಿಕರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಕ್ವಾರಂಟೈನ್ ಶಿಬಿರಗಳಲ್ಲಿ ಕೆಲವರ ಅಮಾನವೀಯ ವರ್ತನೆ ಕಂಡವರಿಗೆ ಈ ದೃಶ್ಯ ಮುದ ನೀಡಿದೆ ಎಂದು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/2x0pNmc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...