ಮುಂಬಯಿ: ರಾತ್ರಿ 10 ಗಂಟೆಯ ಸುದ್ದಿ ವಾಹಿನಿಯ ಚರ್ಚೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಪತ್ರಕರ್ತ ಮತ್ತು ಆತನ ಪತ್ನಿ ಮೇಲೆ ಹಲ್ಲೆ ನಡೆದಿದೆ. ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಾರೆ. ಹಲ್ಲೆಗೆ ಒಳಗಾದವರು ಖಾಸಗಿ ವಾಹಿನಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮತ್ತು ಅವರ ಪತ್ನಿ ಎಂದು ತಿಳಿದು ಬಂದಿದೆ. ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ದಾಳಿಗೆ ನೇರ ಹೊಣೆ ಕಾಂಗ್ರೆಸ್ ಮುಖ್ಯಸ್ಥೆ ಎಂದು ಅರ್ನಬ್ ಗೋಸ್ವಾಮಿ ವಿಡಿಯೋ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. 'ಈ ರಾಷ್ಟ್ರದ ಅತಿದೊಡ್ಡ ಹೇಡಿ' ಎಂದು ಜರೆದಿರುವ ಗೋಸ್ವಾಮಿ, ತನ್ನ ಮತ್ತು ಪತ್ನಿಯ ಮೇಲಿನ ದಾಳಿಗೆ ಸೋನಿಯಾ ಗಾಂಧಿಯೇ ನೇರ ಕಾರಣ. ತನಗೇನಾದರು ಸಂಭವಿಸಿದರೆ ಅದಕ್ಕೂ ಸೋನಿಯಾ ಗಾಂಧಿ ಅವರೇ ಕಾರಣ ಎಂದು ಆರೋಪಿಸಿ ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪತ್ರಕರ್ತರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಮುಂಬಯಿನ ಎನ್‌ಎಂ ಜೋಶಿ ಮಾರ್ಗ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಹಲ್ಲೆ ನಡೆಸಿದವರು ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾಗಿದೆ. ಪತ್ರಕರ್ತ ದಂಪತಿ ಮೇಲಿನ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭ ಪಲ್ಘಾರ್‌ನಲ್ಲಿ ನಡೆದ ಹಿಂದೂ ಸಾಧುಗಳ ಹತ್ಯೆ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮೌನವನ್ನು ಪ್ರಶ್ನಿಸುವ ಬರದಲ್ಲಿ 'ಕ್ರಿಶ್ಚಿಯನ್ ಪಾದ್ರಿಗಳು ಕೊಲ್ಲಲ್ಪಟ್ಟಿದ್ದರೆ ಹೀಗೆ ಸುಮ್ಮನೆ ಇರುತ್ತಿದ್ದಿರಾ?' ಎಂದೆಲ್ಲ ಪ್ರಶ್ನಿಸಿದ್ದರು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.
from India & World News in Kannada | VK Polls https://ift.tt/3eJeakD