ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾದವನ್ನು ಮುಂದಿಟ್ಟುಕೊಂಡು ಕಲಾಪಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್ ಮುಂದಾಗಿದೆ. ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭಗೊಳ್ಳಲಿದ್ದು ಆಡಳಿತ ಪಕ್ಷವನ್ನು ಕಟ್ಟಿಹಾಕಲು ವಿಪಕ್ಷಗಳು ತಂತ್ರ ರೂಪಿಸುತ್ತಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆದಿದ್ದು ಎಲ್ಲಾ ಶಾಸಕರು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ. ವಿಧಾನಸಭೆಯ ಕೊಠಡಿ ನಂಬರ್ 106 ರಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಪಾಕಿಸ್ತಾನದ ಏಜೆಂಟ್ ಎಂದು ಕಿಡಿಕಾರಿದ್ದರು. ಯತ್ನಾಳ್ ಈ ಹೇಳಿಕೆ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚನೆ ಮಾಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಸೋಮವಾರ ಸದನ ಆರಂಭವಾಗುತ್ತಿದ್ದಂತೆ ಯತ್ನಾಳ್ ವಿಚಾರವನ್ನು ಮುಂದಿಟ್ಟುಕೊಂಡು ಗದ್ದಲ ಉಂಟು ಮಾಡುವುದು ಕಾಂಗ್ರೆಸ್ ಯೋಜನೆಯಾಗಿದೆ. ಸೋಮವಾರ ರಾಜ್ಯಪಾಲದ ಭಾಷಣದ ಮೇಲಿನ ಚರ್ಚೆಗೆ ಸರ್ಕಾರ ಉತ್ತರ ನೀಡಲಿದೆ. ಆದರೆ ಈ ವೇಳೆ ಯತ್ನಾಳ್ ವಿವಾದವನ್ನು ಮುಂದಿಟ್ಟು ಸದನದಲ್ಲಿ ಆಡಳಿತ ಪಕ್ಷದ ಮೇಲೆ ಮುಗಿಬೀಳುವುದು ಸಿದ್ದರಾಮಯ್ಯ ತಂತ್ರಗಾರಿಕೆಯಾಗಿದೆ. ಯತ್ನಾಳ್ ಕ್ಷಮೆಯಾಚನೆ ಮಾಡಬೇಕು ಅಥವಾ ಅವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂಬುವುದು ಕಾಂಗ್ರೆಸ್ ಬೇಡಿಕೆಯಾಗಿದೆ. ಯತ್ನಾಳ್ ಜೊತೆಗೆ ಸಂಸದ ಅನಂತ್ ಕುಮಾರ್ ಹೆಗಡೆ ಮಹಾತ್ಮ ಗಾಂಧಿ ಕುರಿತಾದ ಹೇಳಿಕೆ ವಿವಾದವನ್ನು ಸದನದ ಮುಂದಿಟ್ಟು ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ತಂತ್ರಕ್ಕೆ ಬಿಎಸ್‌ವೈ ಪ್ರತಿತಂತ್ರ ಯತ್ನಾಳ್ ವಿಚಾರವನ್ನು ಮುಂದಿಟ್ಟುಕೊಂಡು ಸದನಕ್ಕೆ ಅಡ್ಡಿಪಡಿಸುವ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರವನ್ನು ಹೂಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಜ್ಜಾಗಿದ್ದಾರೆ. ಎಲ್ಲಾ ಶಾಸಕರಿಗೂ ಹಾಗೂ ಸಚಿವರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಿದ್ದಾರೆ. ಯತ್ನಾಳ್ ವಿಚಾರವಾಗಿ ಕಾಂಗ್ರೆಸ್ ಸದನದಲ್ಲಿ ಗದ್ದಲ ಉಂಟು ಮಾಡಿದ ಸಂದರ್ಭದಲ್ಲಿ ಅದಕ್ಕೆ ಸೂಕ್ತ ಉತ್ತರವನ್ನು ನೀಡುವುದು ಬಿಜೆಪಿ ತಂತ್ರವಾಗಿದೆ. ಎಂಟು ವಿಧೇಯಕಗಳ ಮಂಡನೆ ಸೋಮವಾರ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನಲ್ಲಿ ಒಟ್ಟು ಎಂಟು ವಿಧೇಯಕಗಳನ್ನು ಸರ್ಕಾರ ಮಂಡನೆ ಮಾಡಲಿದೆ. ಈ ಪೈಕಿ ನಾಲ್ಕು ವಿಧೇಯಕಗಳನ್ನು ಸಿಎಂ ಮಂಡನೆ ಮಾಡದಲಿದ್ದು ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಹಾಗೂ ವಿವಿ ತಿದ್ದುಪಡಿ ವಿಧೇಯಕ ಇದರಲ್ಲಿ ಒಳಗೊಂಡಿದೆ.
from India & World News in Kannada | VK Polls https://ift.tt/38dOLuT