ಲಾಹೋರ್: ಕ್ರಿಕೆಟ್ ವೃತ್ತಿ ಜೀವನದ ಬಳಿಕ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮೂಲಕ ಕ್ರಿಕೆಟ್ ಚಟುವಟಿಕೆಗಳ ಬಗ್ಗೆ ಅವಲೋಕನ ಹಾಗೂ ವಿಮರ್ಶೆ ಮಾಡಿಕೊಂಡು ಬರುತ್ತಿರುವ ರಾವಿಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಪಾಕಿಸ್ತಾನದ ಮಾಜಿ ವೇಗದ ಬೌಲರ್ , ಇದೀಗ ಭೀತಿ ಹಿನ್ನೆಲೆಯಲ್ಲಿ ಮನುಷ್ಯರಾಗಿ ಚಿಂತಿಸುವ ಸಮಯ ಬಂದಿದೆ ಎಂದಿದ್ದಾರೆ. ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರು ಭಯಭೀತಗೊಂಡಿದ್ದಾರೆ. ಬಹುತೇಕ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ಧಗಿತಗೊಂಡಿದೆ. ಅದೇ ಹೊತ್ತಿಗೆ ಧರ್ಮ ಹಾಗೂ ಆರ್ಥಿಕ ಸ್ಥಿತಿಯನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಒಬ್ಬರನ್ನೊಬ್ಬರು ನೆರವು ಮಾಡಬೇಕಿದೆ ಎಂದು ಅಖ್ತರ್ ಕರೆ ನೀಡಿದ್ದಾರೆ. "ಕೊರೊನಾ ವೈರಸ್ ಜಾಗತಿಕ ವಿಪತ್ತು ಆಗಿದ್ದು, ನಾವು ಧರ್ಮಕ್ಕೂ ಮಿಗಿಲಾಗಿ ಚಿಂತನೆ ಮಾಡಬೇಕಿದೆ. ಕೋವಿಡ್ 19 ಹರಡದಂತೆ ತಡೆಯಲು ಲಾಕ್‌ಡೌನ್ ಮಾಡಲಾಗುತ್ತಿದೆ. ಹಾಗೊಂದು ವೇಳೆ ನೀವು ಸಾಮಾಜಿಕ ಸ್ಥಗಳಲ್ಲಿ ಭಾಗಿಯಾದರೆ ಯಾವುದೇ ನೆರವಾಗುವುದಿಲ್ಲ" ಎಂದು ನುಡಿದರು. ಅದೇ ಹೊತ್ತಿಗೆ ಕೊರೊನಾ ವೈರಸ್ ಭೀತಿಯಲ್ಲಿ ಜನರು ಒಮ್ಮಲೇ ಸಾಮಾನುಗಳನ್ನು ಖರೀದಿಸಿ ಇಡದಂತೆ ಮನವಿ ಮಾಡಿದರು. "ನೀವು ವಸ್ತುಗಳನ್ನು ಸಂಗ್ರಹಿಸುವುದನ್ನು ಯೋಚಿಸಿದರೆ, ದಿನಗೂಲಿ ಕಾರ್ಮಿಕರ ಸ್ಥಿತಿ ಏನಾಗಲಿದೆ ಎಂಬುದನ್ನು ಯೋಚಿಸಿ ನೋಡಿ. ಸ್ಟೋರ್‌ಗಳು ಖಾಲಿಯಾಗಲಿದೆ. ಮೂರು ತಿಂಗಳುಗಳ ಬಳಿಕ ನೀವು ಬದುಕಲಿದ್ದೀರಿ ಎಂಬುದಕ್ಕೆ ಗ್ಯಾರಂಟಿ ಏನಿದೆ? ದಿನಗೂಲಿ ಕಾರ್ಮಿಕರು ಹಾಗೂ ಅವರ ಕುಟುಂಬದ ಬಗ್ಗೆಯೂ ಯೋಚಿಸಿ. ಹಿಂದೂ ಅಥವಾ ಮುಸ್ಲಿಂ ಅಲ್ಲ; ಮನುಷ್ಯರಾಗಿ ಚಿಂತಿಸುವ ಸಮಯ ಬಂದಿದೆ. ಒಬ್ಬರನ್ನೊಬ್ಬರು ನೆರವು ಮಾಡುವ ಸಮಯ ಬಂದಿದೆ" ಎಂದರು. "ಶ್ರೀಮಂತರು ಬಚಾವ್ ಆಗಲಿದ್ದಾರೆ. ಹಾಗಿದ್ದರೆ ಬಡವರ ಸ್ಥಿತಿಯೇನು? ನಂಬಿಕೆಯನ್ನಿರಿಸಿ. ಪ್ರಾಣಿಗಳ ಹಾಗೆ ಜೀವಿಸಬೇಡಿ. ಮನುಷ್ಯರಾಗಿ ಜೀವಿಸಿ. ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಸ್ಥಿತಿಯನ್ನು ಹೊಂದಬೇಕು. ವಸ್ತುಗಳನ್ನು ಸ್ಟೋರ್ ಮಾಡಿಡಬೇಡಿ. ಇದು ಒಬ್ಬರನ್ನೊಬ್ಬರಿಗೆ ನೆರವಾಗುವ ಸಮಯ. ನಾವು ಮಾನವರಾಗಿ ಬದುಕಬೇಕಿದೆ" ಎಂದರು. ಜಾಗತಿಕವಾಗಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 338448ಕ್ಕೆ ಏರಿಕೆಯಾಗಿದೆ. ಈ ಪೈಕಿ 14691 ಮಂದಿ ಮೃತಪಟ್ಟಿದ್ದಾರೆ. ಇನ್ನು ಪಾಕಿಸ್ತಾನದಲ್ಲೂ ಕೋವಿಡ್ 19 ಮಾರಕವಾಗಿ ಹರಡುತ್ತಿದ್ದು, ಇದುವರೆಗೆ 776 ಮಂದಿಗೆ ಸೋಂಕು ತಗುಲಿದೆ. ಅಲ್ಲದೆ ಐದು ಮಂದಿ ಸಾವಿಗೆ ಶರಣಾಗಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2U9WXss