ಹೊಸದಿಲ್ಲಿ: ಜಮ್ಮು ಕಾಶ್ಮೀರದ ಲೇಹ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರ ಯೋಧನಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸೇನೆಯ ಮೂಲಗಳು ಬುಧವಾರ ಮಾಹಿತಿ ನೀಡಿದೆ. ಭಾರತದ ಸೈನಿಕರಲ್ಲಿ ದಾಖಲಾಗುತ್ತಿರುವ ಮೊದಲ ಕೋವಿಡ್ 19 ಪ್ರಕರಣ ಇದಾಗಿದ್ದು, ಈ ಹಿನ್ನೆಲೆ ಇತರೆ ಸೈನಿಕರಲ್ಲಿ ಆತಂಕ ಹೆಚ್ಚಿಸಿದೆ. ಲೇಹ್‌ನ ಛುಛೋತ್ ಗ್ರಾಮದ ನಿವಾಸಿಯಾಗಿರುವ ಕೊರೊನಾ ಸೋಂಕಿತ ಯೋಧನಿಗೆ ತಂದೆಯಿಂದ ವೈರಸ್ ಹರಡಿದೆ ಎಂದು ತಿಳಿದುಬಂದಿದೆ. ಇರಾನ್‌ನಿಂದ ಫೆಬ್ರವರಿ 20ರಂದು ಏರ್ ಇಂಡಿಯಾ ವಿಮಾನದಲ್ಲಿ ಬಂದಿದ್ದ ಯೋಧನ ತಂದೆಗೆ ಕೊರೊನಾ ಸೋಂಕು ತಗುಲಿತ್ತು. ಅವರು ಫೆಬ್ರವರಿ 29ರಿಂದಲೂ ಲಡಾಖ್ ಹಾರ್ಟ್ ಫೌಂಡೇಶನ್‌ನಲ್ಲಿ ಅವರನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಇನ್ನು, ಫೆಬ್ರವರಿ 25ರಿಂದ ರಜೆಯಲ್ಲಿದ್ದ ಯೋಧ, ಮಾರ್ಚ್ 2 ರಂದು ಕರ್ತವ್ಯಕ್ಕೆ ಮರಳಿದ್ದರು. ಬಳಿಕ ಮಾರ್ಚ್ 7ರಿಂದ 34 ವರ್ಷದ ಯೋಧನನ್ನು ಪ್ರತ್ಯೇಕವಾಗಿ ಸೋನಮ್ ನುರ್ಬೂ ಮೆಮೋರಿಯಲ್ (ಎಸ್‌ಎನ್‌ಎಂ) ಆಸ್ಪತ್ರೆಯಲ್ಲಿ ಇಡಲಾಗಿದೆ. ಮಾರ್ಚ್ 16 ರಂದು ವೀರ ಯೋಧನಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ ಎಂದು ಸೇನೆಯ ಮೂಲಗಳು ಮಾಹಿತಿ ನೀಡಿವೆ. ಯೋಧನಷ್ಟೇ ಅಲ್ಲದೆ, ಆತನ ಸಹೋದರಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನೂ ಎಸ್‌ಎನ್‌ಎಂ ಹಾರ್ಟ್ ಫೌಂಡೇಶನ್ ಆಸ್ಪತ್ರೆಯಲ್ಲಿ ಇಡಲಾಗಿದೆ ಎಂದು ತಿಳಿದುಬಂದಿದೆ. ಈ ಯೋಧ ಮಾರ್ಚ್ 2 ರಂದು ಕರ್ತವ್ಯಕ್ಕೆ ಮರಳಿದ ಬಳಿಕವೂ, ತನ್ನ ತಂದೆ ಆಸ್ಪತ್ರೆಯಲ್ಲಿ ಇದ್ದ ವೇಳೆ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದು, ಕೆಲಕಾಲ ಛುಛೋತ್ ಗ್ರಾಮದಲ್ಲೇ ತಂಗಿದ್ದರು ಎಂದೂ ಸೇನೆಯ ಮೂಲಗಳು ತಿಳಿಸಿವೆ.
from India & World News in Kannada | VK Polls https://ift.tt/33oOnck