(ಉತ್ತರಾಖಂಡ): ಆನೆಗಳು ರೈಲಿಗೆ ಸಿಲುಕಿ ಸಾವನ್ನಪ್ಪುವ ಘಟನೆಗಳು ದೇಶದಲ್ಲಿ ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಲು ರೈಲ್ವೆ ಇಲಾಖೆ ಹೊಸ ಸಾಹಸವೊಂದಕ್ಕೆ ಕೈಹಾಕಿದೆ. ಈಶಾನ್ಯ ರೈಲ್ವೆ ಮೊರಾದಾಬಾದ್ ವಲಯ, ಆನೆಗಳನ್ನು ಓಡಿಸಲು ಜೇನ್ನೊಣಗಳ ಮೊರೆ ಹೋಗಿದೆ..! ಆನೆಗೂ, ಜೇನಿಗೂ ಏನಿದು ಸಂಬಂಧ..? ಆನೆಗಳು ನೊಣಗಳ ಶಬ್ಧಕ್ಕೆ ಬಹಳವಾಗಿ ಹೆದರುತ್ತವೆ. ಆನೆಗಳ ಕಿವಿ, ಸೊಂಡಿನ ಒಳಗೆ ಜೇನುನೊಣಗಳು ಹೊಕ್ಕರೆ ಆನೆಗಳು ಜೀವ ಹೋದಂತೆ ಒದ್ದಾಡಿ ಹೋಗುತ್ತವೆ. ಹೀಗಾಗಿ, ಜೇನುನೊಣಗಳ ಸದ್ದು ಕೇಳಿಬಂದ ಕೂಡಲೇ ಆನೆಗಳು ಪೇರಿ ಕೀಳುತ್ತವೆ. ಗ್ರಾಮಸ್ಥರು ಈ ವಿಚಾರವಾಗಿ ರೈಲ್ವೆ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮಾಹಿತಿಯನ್ವಯ ಹೊಸ ಐಡಿಯಾ ಹುಡುಕಿದ ರೈಲ್ವೆ ಇಲಾಖೆ, ರೈಲು ಬರುವ ಕೆಲ ಕ್ಷಣಗಳ ಮುನ್ನ ರೈಲು ಹಳಿಯ ಬಳಿ ಜೇನು ನೊಣಗಳ ಸದ್ದು ಬರುವಂತೆ ಮಾಡುತ್ತಿದ್ದಾರೆ. ರೈಲು ನಿಲ್ದಾಣಗಳ ಬಳಿ ದೊಡ್ಡ ದೊಡ್ಡ ಸ್ಪೀಕರ್ ಅಳವಡಿಸಿರುವ ರೈಲ್ವೆ ಇಲಾಖೆ, ರೈಲು ಬರುವ ಕೆಲ ಕ್ಷಣಗಳ ಮುನ್ನ ಸ್ಪೀಕರ್‌ನಲ್ಲಿ ಜೇನ್ನೊಣಗಳ ಸದ್ದು ಮಾಡುತ್ತದೆ. ಆಗ ಒಂದು ವೇಳೆ ರೈಲುಗಳು ಹಳಿಯ ಬಳಿ ಇದ್ದರೆ ಓಡಿ ಹೋಗುತ್ತವೆ. ಈ ಪ್ರಯೋಗ ಸಾಕಷ್ಟು ಯಶಸ್ಸು ಕಂಡಿದೆ. ರೈಲ್ವೆ ವಿಭಾಗೀಯ ಮ್ಯಾನೇಜರ್ ನೀಡುವ ಮಾಹಿತಿ ಪ್ರಕಾರ, ಈ ಭಾಗದಲ್ಲಿ ರೈಲಿಗೆ ಆನೆಗಳು ಸಿಲುಕುವ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಜೇನ್ನೊಣಗಳ ಹಾರಾಟದ ಸದ್ದನ್ನು ದೂರದಿಂದಲೇ ಗ್ರಹಿಸುವ ಆನೆಗಳು, ರೈಲ್ವೆ ಹಳಿಗಳ ಬಳಿ ಸುಳಿಯುತ್ತಲೇ ಇಲ್ಲ ಎಂದು ಅಧಿಕಾರಿಗಳು ವಿವರಿಸುತ್ತಾರೆ.
from India & World News in Kannada | VK Polls https://ift.tt/2TWLLiG