ಕೊರೊನಾ ವೈರಸ್‌: ಆಟಗಾರರಿಗೆ ಪೊಲಾರ್ಡ್‌ ಕಿವಿ ಮಾತು

ಹೊಸದಿಲ್ಲಿ: ಸಾಂಕ್ರಾಮಿಕ ರೋಗ ತಮಗೆ ನೀಡಿರುವ ವಿರಾಮದಲ್ಲಿ ವೃತ್ತಿಜೀವನದ ಬಗ್ಗೆ 'ಆತ್ಮಾವಲೋಕನ' ಮಾಡಲು ಉತ್ತಮ ಸಮಯ ಎಂದು ವೆಸ್ಟ್ ಇಂಡೀಸ್‌ನ ಸೀಮಿತ ಓವರ್‌ಗಳ ನಾಯಕ ಕೀರನ್ ಪೊಲಾರ್ಡ್ ಅಭಿಪ್ರಾಯಪಟ್ಟಿದ್ದು, ಆಟಗಾರರು 'ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಡವಾಗಲು' ಈ ಸಮಯವನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಕೋರೊನಾ ವೈರಸ್‌ ಇಡೀ ವಿಶ್ವದಾದ್ಯಂತ 12,000ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗದುಕೊಂಡಿದ್ದು, ಜಾಗತಿಕವಾಗಿ 250,000 ಜನರಿಗೆ ಕೋವಿಡ್‌-19 ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕ್ರೀಡಾಪಟುಗಳ ಹಾಗೂ ಅಭಿಮಾನಿಗಳ ಆರೋಗ್ಯದ ಹಿತದೃಷ್ಠಿಯಿಂದ ಜಗತ್ತಿನ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೀರನ್‌ ಪೋಲಾರ್ಡ್‌, "ಆತ್ಮಾವಲೋಕನ ಮಾಡಿಕೊಳ್ಳಲು ಇದು ಉತ್ತಮ ಸಮಯ. ನಿಮ್ಮ ವೃತ್ತಿಜೀವನದಲ್ಲಿ ಒಬ್ಬ ವ್ಯಕ್ತಿಯಾಗಿ ನೀವು ಎಲ್ಲಿದ್ದೀರಿ ಮತ್ತು ಮುಂದಿನ ಗುರಿ ಸಾಧನೆಗಾಗಿ ನಿಮಗೆ ಯಾವುದರ ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ಇದು ಒಳ್ಳೆಯ ಸಮಯ," ಎಂದು ವಿಂಡೀಸ್‌ ನಾಯಕ ಜಮೈಕಾ ಗ್ಲೇನರ್‌ಗೆ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ತನ್ನ ಬಲ ತೊಡೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹೊರಗುಳಿದಿದ್ದ ಪೊಲಾರ್ಡ್, ತನ್ನ ಫಿಟ್‌ನೆಸ್‌ ಉತ್ತಮ ಪಡಿಸಿಕೊಳ್ಳಲು ಮತ್ತು ಮುಂದಿನ ಋತುವಿಗೆ ತಯಾರಿ ನಡೆಸಲು ಇದು ಉತ್ತಮ ಸಮಯ ಎಂದು ಹೇಳಿದರು. "ಯಾವಾಗ ಪರಿಸ್ಥಿತಿ ಸರಿಯಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಆದರೆ, ಇದೀಗ ಸಿಕ್ಕಿರುವ ಅಲ್ಪ ವಿರಾಮವನ್ನು ಪ್ರತಿಯೊಬ್ಬ ಆಟಗಾರರು ಸದುಪಯೋಗಪಡಿಸಿಕೊಳ್ಳಬೇಕು. ಫಿಟ್ನೆಸ್‌ ಉತ್ತಮಪಡಿಸಿಕೊಳ್ಳುವ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗುವತ್ತ ಗಮನ ಹರಿಸಬೇಕು. ನಿಯಂತ್ರಣಕ್ಕೆ ಬಂದ ಬಳಿಕ ನಮಗೆ ತಕ್ಷಣ ಪ್ರವಾಸ ಆರಂಭವಾಗಲಿದೆ. ಆಗ ಪೂರ್ವ ತಯಾರಿ ನಡೆಸಲು ಸಮಯದ ಅಭಾವ ಉಂಟಾಗಲಿದೆ. ಹಾಗಾಗಿ, ಉತ್ತಮ ಪ್ರದರ್ಶನ ತೋರುವ ಸಲುವಾಗಿ ಎಲ್ಲ ಆಟಗಾರರು ವೈಯಕ್ತಿಕವಾಗಿ ತಯಾರಿ ನಡೆಸಬೇಕು,'' ಎಂದು ಸಲಹೆ ನೀಡಿದ್ದಾರೆ. ಮಾರಣಾಂತಿಕ ಸೋಂಕು ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಇತ್ತೀಚೆಗೆ ದೇಶೀಯ ಕ್ರಿಕೆಟ್‌ ಆವೃತ್ತಿಯನ್ನು ಒಂದು ತಿಂಗಳು ತಡವಾಗಿ ಆರಂಭಿಸಲು ನಿರ್ಧರಿಸಿದೆ. ಕಳೆದ ಶುಕ್ರವಾರ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿಯು ಇಂಗ್ಲೆಂಡ್‌ನಲ್ಲಿ ಮೇ 28ರವರೆಗೆ ವೃತ್ತಿಪರ ಕ್ರಿಕೆಟ್‌ ಅನ್ನು ಅಮಾನತುಗೊಳಿಸಿದೆ. ಜೂನ್‌ 4 ರಿಂದ ವೆಸ್ಟ್ ಇಂಡೀಸ್‌ ತಂಡ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಇಂಗ್ಲೆಂಡ್‌ ವಿರುದ್ಧ ಆಡಲಿದೆ. ಇದಕ್ಕೂ ಮುನ್ನ ಮೇ. 22 ಮತ್ತು ಮೇ 28ರಂದು ಕ್ರಮವಾಗಿ ಇಂಗ್ಲೆಂಡ್‌ ಲಯನ್ಸ್‌ ಮತ್ತು ವರ್ಸೆಸ್ಟೈರ್‌ಶರ್‌ ವಿರುದ್ಧ ಎರಡು ಅಭ್ಯಾಸ ಪಂದ್ಯಗಳಲ್ಲಿ ಸೆಣಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2J8dnLq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...