ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ರುದ್ರ ನರ್ತನ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 169ಕ್ಕೇರಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ರಾತ್ರಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೊರೋನಾ ವೈರಸ್ ಹರಡುವಿಕೆಯಿಂದಾಗಿ ದೇಶದಲ್ಲಿ ಉಂಟಾಗಿರುವ ಪರಿಸ್ಥಿತಿ ಹಾಗೂ ಅದರ ನಿಯಂತ್ರಣಕ್ಕಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳ ಕುರಿತಾಗಿ ಪ್ರಧಾನಿ ಮೋದಿ ದೇಶವಾಸಿಗಳಿಗೆ ಮಾಹಿತಿ ನೀಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಕಚೇರಿ, ಇಂದು ರಾತ್ರಿ 8 ಗಂಟೆಗೆ ಕೋವಿಡ್ -19 ಸಂಬಂಧಿತ ಸಮಸ್ಯೆಗಳು ಹಾಗೂ ಅದರ ನಿಯಂತ್ರಣಕ್ಕಾಗಿ ನಡೆಸಲಾಗುತ್ತಿರುವ ಪ್ರಯತ್ನಗಳ ಕುರಿತಾಗಿ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಮೋದಿ ನೇತೃತ್ವದಲ್ಲಿನ ಉನ್ನತ ಮಟ್ಟದ ಸಭೆ ಕೋವಿಡ್ -19 ನಿಯಂತ್ರಣಕ್ಕಾಗಿ ನಡೆಸಲಾಗುತ್ತಿರುವ ಪ್ರಯತ್ನಗಳ ಪರಾಮರ್ಶನೆ ನಡೆಸಿದ್ದು, ಭಾರತವನ್ನು ಈ ಮಹಾಮಾರಿಯಿಂದ ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.
from India & World News in Kannada | VK Polls https://ift.tt/2JaxOHX