ಶ್ರೀನಗರ: ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳ ನುಸುಳುವಿಕೆಯಿಂದಾಗಿ ಉಂಟಾಗಿರುವ ಆತಂಕದ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜ್ಜಾದ್ ಲೋನೆ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಸಂವಿಧಾನದ 35ಎ ವಿಧಿಯನ್ನು ರದ್ದುಪಡಿಸುವ ದಿಟ್ಟ ಕ್ರಮವನ್ನು ಕೇಂದ್ರವು ಕೈಗೊಳ್ಳಲಿದೆ ಎಂಬ ಕುರಿತು ಸಾಕಷ್ಟು ಊಹಾಪೋಹಗಳೆದ್ದಿರುವುದು ರಾಜಕೀಯ ಪಕ್ಷಗಳಲ್ಲಿ ಆತಂಕ ಮೂಡಿಸಿದೆ. ಭಾನುವಾರ ಜಮ್ಮು-ಕಾಶ್ಮೀರದಲ್ಲಿ ಭಾರಿ ಪ್ರಮಾಣದ ಸೇನೆ ನಿಯೋಜನೆ ಮತ್ತು ಅಮರನಾಥ ಯಾತ್ರೆ ರದ್ದುಗೊಳಿಸಿರುವ ಕೇಂದ್ರದ ನಿರ್ಧಾರದ ಬಗ್ಗೆ ಚರ್ಚಿಸಲು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ, ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ನಿವಾಸದಲ್ಲಿ ಕಣಿವೆ ರಾಜ್ಯದ ಪ್ರಮುಖ ಪಕ್ಷಗಳು ಭಾನುವಾರ ಸಭೆ ನಡೆಸಿದ್ದವು. ಮೊದಲು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ನಿವಾಸದಲ್ಲಿ ಸರ್ವಪಕ್ಷ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಫಾರೂಕ್ ಅವರ ಅನಾರೋಗ್ಯದ ಕಾರಣ, ಅವರು ಅಲ್ಲಿಗೆ ತೆರಳಲು ಸಾಧ್ಯವಿಲ್ಲವೆಂದು ಹೇಳಿದರು. ಹೀಗಾಗಿ ಸಭೆಯ ಸ್ಥಳವನ್ನು ಶ್ರೀನಗರದ ಫಾರೂಕ್ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಇದಕ್ಕೂ ಮೊದಲು ಶ್ರೀನಗರದ ಹೋಟೆಲೊಂದರಲ್ಲಿ ಸರ್ವಪಕ್ಷ ಸಭೆ ನಡೆಸಲು ಉದ್ದೇಶಿಸಲಾಗಿತ್ತಾದರೂ ಪೊಲೀಸರು ರಾಜಕೀಯ ಸಭೆ ನಡೆಸಲು ಅನುಮತಿ ನೀಡಲಿಲ್ಲ. ಪಿಡಿಪಿ, ಕಾಂಗ್ರೆಸ್ ಪೀಪಲ್ಸ್ ಮೂವ್‌ಮೆಂಟ್ ಪಕ್ಷದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಸಂವಿಧಾನದ 370 ಮತ್ತು 35ಎ ವಿಧಿ ರದ್ದತಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಸಭೆ ನಿರ್ಧರಿಸಿತು. ಹೆಚ್ಚುತ್ತಿರುವ ಭದ್ರತಾ ಪಡೆಗಳ ನಿಯೋಜನೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತು ಗೃಹ ಸಚಿವ ಅಮಿತ್ ಶಾ ನಡುವೆ ಗಹನ ಚರ್ಚೆ, ಕ್ರಿಕೆಟಿಗರು, ಅಮರನಾಥ ಯಾತ್ರಿಕರು ತುರ್ತಾಗಿ ರಾಜ್ಯ ಬಿಡಬೇಕೆಂಬ ಕಟ್ಟಾಜ್ಞೆಗಳು ಬೃಹತ್ ನಿರ್ಧಾರವೊಂದರ ಜಾರಿಯ ಸಿದ್ಧತೆಗಳು ಎಂಬಂತೆ ಕಾಣುತ್ತಿವೆ. ಇದರ ಜತೆಗೆ ಸೋಮವಾರದಿಂದ ಇಡೀ ರಾಜ್ಯದಲ್ಲಿ ಇಂಟರ್‌ನೆಟ್ ಬಂದ್ ಮಾಡಲಾಗಿದ್ದು, ಆ.5ರಿಂದ 10ರವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದು ಕೇವಲ ಉಗ್ರರ ದಾಳಿ ಭೀತಿಗೆ ಕೈಗೊಂಡ ಕ್ರಮಗಳಲ್ಲ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲ, ಜಮ್ಮು ಭಾಗದಲ್ಲೂ ಪ್ರಮುಖ ಕಟ್ಟಡಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು, ಪೆಟ್ರೋಲ್ ಮಾರಾಟದ ಮೇಲೂ ನಿರ್ಬಂಧ ವಿಧಿಸಲಾಗಿದೆ.
- -ಮಾಜಿ ಸಿಎಂ ಒಮರ್ ಅಬ್ದುಲ್ಲಾಗೆ ಗೃಹಬಂಧನ
- -ಅಮಿತ್ ಶಾ- ಅಜಿತ್ ಧೋವಲ್ ಮಹತ್ವದ ಸಭೆ
- -ವಾರಾಂತ್ಯ ಶ್ರೀನಗರದಲ್ಲಿ 3 ದಿನ ಮೊಕ್ಕಾಂಗೆ ಶಾ ಸಿದ್ಧತೆ
- -ಇರ್ಫಾನ್ ಪಠಾಣ್ ಮಾರ್ಗದರ್ಶನದ ಕ್ರಿಕೆಟ್ ಶಿಬಿರ ನಿಲ್ಲಿಸಿ ಶ್ರೀನಗರ ತೊರೆಯಲು ಆದೇಶ
- -ಟಿಕೆಟ್ ಇಲ್ಲದೆಯೇ ರೈಲಿನಲ್ಲಿ ಪ್ರಯಾಣಕ್ಕೆ ಅವಕಾಶ, ತುರ್ತು ಕಾಶ್ಮೀರ ಬಿಡಲು ಅವಕಾಶ
- -ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಬರ; ಅನುಮತಿ ಇಲ್ಲದೆ ಮಾರಾಟವಿಲ್ಲ
- -ಭಾರತೀಯ ಸೇನೆ ಗುಂಡಿಗೆ ಬಲಿಯಾದ ಬ್ಯಾಟ್-ಉಗ್ರರ ಶವ ಪಡೆಯಲು ಪಾಕಿಸ್ತಾನ ನಕಾರ
- -ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯ ಪ್ರವೇಶಕ್ಕೆ ಇಮ್ರಾನ್ ಖಾನ್ ಮೊರೆ
- -ಕುಪ್ವಾರಾ ಜಿಲ್ಲೆಯ ಕೀರನ್ ಸೆಕ್ಟರ್‌ನಲ್ಲಿ ಟೈಲರಿಂಗ್ ಶಾಪ್‌ನಿಂದ 15 ಗ್ರನೇಡ್‌ಗಳು ವಶಕ್ಕೆ
from India & World News in Kannada | VK Polls https://ift.tt/2MNegwj