ಹೊಸದಿಲ್ಲಿ: 370ನೇ ವಿಧಿ ರದ್ದಾಗಿ ಜಮ್ಮು-ಕಾಶ್ಮೀರದ ಏಕೀಕರಣ ಪೂರ್ಣಗೊಂಡಿರುವಂತೆಯೇ ಕಾಂಗ್ರೆಸ್‌ನಲ್ಲಿ ಭಾರೀ ಒಡಕು ಕಾಣಿಸಿಕೊಂಡಿದೆ. ದೀಪೇಂದರ್ ಹೂಡಾ, ಜನಾರ್ದನ ದ್ವಿವೇದಿ ಸೇರಿದಂತೆ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಸರಕಾರದ ನಿರ್ಧಾರವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಗುಲಾಂ ನಬಿ ಆಜಾದ್, ಪಿ. ಚಿದಂಬರಂ ಮುಂತಾದ ನಾಯಕರು 370ನೇ ವಿಧಿ ರದ್ದತಿಯನ್ನು ಪ್ರಶ್ನಿಸಿ ಕಾಂಗ್ರೆಸ್ ವರಿಷ್ಠರ ನಿಲುವನ್ನು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರಲ್ಲೂ ತೀವ್ರ ಒಡಕು ಕಾಣಿಸಿಕೊಂಡಿದೆ. ನೆಹರೂ ಆಡಳಿತದಲ್ಲಿ ಮಾಡಿದ ಐತಿಹಾಸಿಕ ಪ್ರಮಾದವನ್ನು ಈಗ ಮೋದಿ ಸರಕಾರ ಸರಿಪಡಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ದ್ವಿವೇದಿ ಪ್ರತಿಪಾದಿಸಿದ್ದಾರೆ.
ಇನ್ನೊಬ್ಬ ಹಿರಿಯ ನಾಯಕ ದೀಪೇಂದರ್ ಹೂಡಾ ಅವರೂ ಸರಕಾರದ ನಿಲುವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಇದು ಕಾಂಗ್ರೆಸ್ ವರಿಷ್ಠರಿಗೆ ತೀವ್ರ ಮುಜುಗರ ತಂದಿದೆ. ಸಾರ್ವಜನಿಕ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೋದರೆ ಭವಿಷ್ಯ ಕರಾಳ ಎಂದು ಅರಿತ ಕಾಂಗ್ರೆಸ್ ನಾಯಕರು 370ನೇ ವಿಧಿ ರದ್ದತಿಯನ್ನು ಬೆಂಬಲಿಸುತ್ತಿದ್ದಾರೆ. ಆದರೆ ನೆಹರೂ-ಗಾಂಧಿ ಕುಟುಂಬದ ಹೊಗಳುಭಟರಂತೆ ವರ್ತಿಸುವ ನಾಯಕರು ಮಾತ್ರ 370ನೇ ವಿಧಿಯ ರದ್ದತಿಯನ್ನು ವಿರೋಧಿಸುತ್ತಿದ್ದಾರೆ. ನಿನ್ನೆ ರಾಜ್ಯಸಭೆಯಲ್ಲಿ ಗೃಹಸಚಿವ ಅಮಿತ್ ಶಾ ಅವರು ವಿಧೇಯಕ ಮಂಡಿಸಿದ ಕೂಡಲೇ ಪಿಡಿಪಿ ಸದಸ್ಯರು ಸಂವಿಧಾನದ ಪ್ರತಿಯನ್ನು ಹರಿದು ಹಾಕಿದರು. ಕೂಡಲೇ ಅವರನ್ನು ಸದನದಿಂದ ಉಚ್ಚಾಟಿಸಲಾಯಿತು. ಆದರೆ ಈ ವಿಷಯವನ್ನು ಖಂಡಿಸುತ್ತಲೇ ಮಾತನಾಡಿದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಾತ್ರ, ಸಂವಿಧಾನವನ್ನು ಬಿಜೆಪಿ ನಾಶಪಡಿಸಿದೆ ಎಂದು ಬಿಂಬಿಸಲು ಯತ್ನಿಸಿದರು.
from India & World News in Kannada | VK Polls https://ift.tt/2KA1Dlw