ಪ್ರತಿಭಾ ಶ್ಯಾನುಬೋಗ್ ನಿಟ್ಟೂರು ಶಿವಮೊಗ್ಗ: ಸಾಂಬಾರ ಪದಾರ್ಥಗಳ ರಾಣಿ ಎಂಬ ಹೆಗ್ಗಳಿಕೆ, ಅಪರಿಮಿತ ಸುವಾಸನೆಯಿಂದ ಪ್ರಸಿದ್ಧವಾದ ಔಷಧೀಯ ಸಸ್ಯವೂ ಆಗಿರುವ ಮಲೆನಾಡಿನ ಪ್ರಮುಖ ಉಪಬೆಳೆ ಸಂಪೂರ್ಣ ಮರೆಯಾಗುವ ಹಂತ ತಲುಪಿದೆ. ಅಡಕೆ, ಕಾಫಿ ತೋಟಗಳಲ್ಲಿ, ನೇರವಾಗಿ ಬಿಸಿಲು ಬೀಳದ ಜಾಗಗಳಲ್ಲಿ ಏಲಕ್ಕಿ ಬೆಳೆಯನ್ನು ಉಪ ಬೆಳೆಯಾಗಿ ಬೆಳೆಯಲಾಗುತ್ತದೆ. ಕಳೆದ 7-8 ವರ್ಷಗಳ ಹಿಂದೆ ಮಲೆನಾಡು ಭಾಗಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಏಲಕ್ಕಿ ಬೆಳೆಯಲಾಗುತ್ತಿತ್ತು. ಹಾಸನ, ಚಿಕ್ಕಮಂಗಳೂರು, ಮಡಿಕೇರಿ ಮತ್ತು ಶಿವಮೊಗ್ಗ ಜೆಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನಲ್ಲಿ ಪ್ರಮುಖ ಉಪ ಬೆಳೆಯಾಗಿ ಏಲಕ್ಕಿ ಬೆಳೆಯಲಾಗುತ್ತಿತು. ಇಲ್ಲಿ ಬೆಳೆದ ಹಸಿರು ಮತ್ತು ಹಳದಿ ಏಲಕ್ಕಿಗಳು ದೊಡ್ಡ ಪ್ರಮಾಣದಲ್ಲಿ ಅರಬ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ನಾನಾ ಕಾರಣಗಳಿಂದ ಬೆಳೆಗಾರರು ಈ ಬೆಳೆ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದು, ಏಲಕ್ಕಿ ಬೆಳೆ ಮಲೆನಾಡಿನಲ್ಲಿ ಮರೆಯಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಗಳಲ್ಲಿ ಏಲಕ್ಕಿ ಬೆಳೆಗೆ ಸ್ವಲ್ಪ ಬೆಲೆ ಕಡಿಮೆ ಇದ್ದರೂ ಕಳೆದ ಒಂದೆರಡು ವರ್ಷಗಳಲ್ಲಿ ಕೆ.ಜಿ. ಒಂದಕ್ಕೆ 3500 ರೂ. ತಲುಪಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಬಂಗಾರದ ಬೆಲೆ ಇದ್ದರೂ ಬೆಳೆಯನ್ನು ಮಾತ್ರ ಬೆಳೆಯಲಾಗದೆ ಬೆಳೆಗಾರರು ಕೈಕೈ ಹಿಸುಕಿಕೊಳ್ಳುವಂತಾಗಿತ್ತು. ಮಂಗ, ಕಾಡುಕೋಣ, ಹಂದಿ, ನವಿಲು ಹಾಗೂ ಕೇರೆ ಹಾವುಗಳ ವಿಪರೀತ ಕಾಟ ಒಂದು ಕಡೆಯಾದರೆ, ಕಳೆದ ಕೆಲವು ವರ್ಷಗಳಿಂದ ಮಲೆನಾಡಲ್ಲಿ ಹೆಚ್ಚುತ್ತಿರುವ ಬೇಸಿಗೆಯ ಗರಿಷ್ಠ , ಅಕಾಲಿಕ ಮಳೆ, ಮಳೆಗಾಲದಲ್ಲಿ ವಿಪರೀತ ಮಳೆ ಆಗುತ್ತಿರುವುದು ಬೆಳೆ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಇದರ ಜತೆಗೆ ಏಲಕ್ಕಿ ಬೆಳೆಯ ನಿರ್ವಹಣೆಯ ವೆಚ್ಚ ಅಧಿಕವಾಗುತ್ತಿರುವ ಕಾರಣಗಳಿಂದ ಬೆಳೆಗಾರರು ಏಲಕ್ಕಿ ಬೆಳೆಯನ್ನೇ ಬೆಳೆಯುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ. ಕೇವಲ ಮನೆ ಖರ್ಚಿಗೆ ಬೇಕಾಗುವಷ್ಟು ಮಾತ್ರ ಬೆಳೆಯಲಾಗುತ್ತಿದೆ. ಬೇಕಿದೆ ಉತ್ತೇಜನಮಲೆನಾಡು ಭಾಗದಲ್ಲಿ ಪ್ರಮುಖ ಬೆಳೆ ಅಡಕೆ. ಆದರೆ ಅಡಕೆ ಬೆಳೆ ಮತ್ತು ಬೆಲೆ ಕೈಕೊಟ್ಟ ಎಲ್ಲ ಕಾಲದಲ್ಲೂ ಬೆಳೆಗಾರರನ್ನು ಬದುಕಿಸಿದ್ದು ಏಲಕ್ಕಿ, ಕಾಳುಮೆಣಸು ಮುಂತಾದ ಪ್ರಮುಖ ಉಪಬೆಳೆಗಳು. ಆಪತ್ಕಾಲದಲ್ಲಿ ನೆರವಾದ ಇಂತಹ ಉಪ ಬೆಳೆಗಳನ್ನು ಉತ್ತೇಜಿಸಿ ಬೆಳೆಗಾರರು ಇವುಗಳ ಬಗ್ಗೆ ಆಸಕ್ತಿ ತೋರುವಂತೆ ಕ್ರಮ ಕೈಗೊಳ್ಳಬೇಕಿದೆ. ಬೆಳೆಗೆ ಹಾನಿ ಮಾಡುವ ಕಾಡು ಪ್ರಾಣಿಗಳು ಮುಂತಾದ ಉಪದ್ರವಗಳನ್ನು ನಿವಾರಿಸಿ, ಹೆಚ್ಚು ಹೆಚ್ಚು ಏಲಕ್ಕಿ ಬೆಳೆ ಬೆಳೆಯವಂತೆ ಮಲೆನಾಡಿಗರನ್ನು ಉತ್ತೇಜಿಸುವ ಕಾರ್ಯ ಸರಕಾರ ಮತ್ತು ಸಾಂಬಾರ ಮಂಡಳಿಯಿಂದ ನಡೆಯಬೇಕಿದೆ. ಸಾಂಬಾರ ಮಂಡಳಿಯಿಂದ ಸಿಗುವ ಸಹಕಾರ ಏಲಕ್ಕಿ ಬೆಳೆಗೆ ಉತ್ತೇಜನ ನೀಡಲು ಸರಕಾರ ಸಂಬಾರ ಮಂಡಳಿಯಿಂದ ಬೆಳೆಗಾರರಿಗೆ ಹಲವು ಪ್ರೋತ್ಸಾಹ ನೀಡುತ್ತದೆ. ಅದರಲ್ಲಿ ಪ್ರಮುಖವಾಗಿ ಏಲಕ್ಕಿ ನಾಟಿ ಮಾಡಲು ಪ್ರತಿ ಕಂತಿಗೆ 25,000 ರೂ. ನಂತೆ ಎರಡು ಕಂತಿನಲ್ಲಿ ವರ್ಷಕ್ಕೆ 50 ಸಾವಿರ ರೂ. ನೀಡಲಾಗುತ್ತದೆ. ಪರಿಶಿಷ್ಟರಿಗೆ, ಕಂತಿಗೆ 66,250 ರೂ. ನಂತೆ ವರ್ಷಕ್ಕೆ 1,32,250 ರೂ., ಏಲಕ್ಕಿ ಸಸಿ ಮಡಿ ಮಾಡಲು ಗಿಡ ಒಂದಕ್ಕೆ ಎರಡು ರೂ. ನಂತೆ 2500 ಗಿಡಗಳಿಗೆ ಸಹಾಯಧನ ನೀಡಲಾಗುತ್ತದೆ. ನೀರಾವರಿಗಾಗಿ ಪಂಪ್ ಸೆಟ್‌ಗೆ ಹಾಗೂ ಏಲಕ್ಕಿ ಒಣಗಿಸಲು ಡ್ರೈ ಯರ್ ಗೆ ಸಹಾಯಧನ ನೀಡಲಾಗುತ್ತದೆ. ಸುಮಾರು 30 ವರ್ಷಗಳಿಂದ ಏಲಕ್ಕಿ ಬೆಳೆಯಲು ಬೆಳೆಗಾರರಿಗೆ ಅನೇಕ ರೀತಿಯ ಪ್ರೋತ್ಸಾಹ ನೀಡುತ್ತಿದ್ದು ಪ್ರಸ್ತುತ ವರ್ಷ 200 ಹೆಕ್ಟೆರ್ ಬೆಳೆ ಮರುನಾಟಿಗೆ ಸಬ್ಸಿಡಿಯನ್ನು ಬೆಳೆಗಾರರಿಗೆ ನೀಡಿದ್ದೇವೆ. ಅಗತ್ಯವಿದ್ದರೆ ಬೆಳೆಗಾರರ ಮನೆಗಳಿಗೆ ಹೋಗಿ ತರಬೇತಿ ಸಹ ನೀಡುತ್ತೇವೆ ಎನ್ನುತ್ತಾರೆ ಸಾಂಬಾರ ಮಂಡಳಿ ಅಧಿಕಾರಿಗಳು. 10 ವರ್ಷಗಳ ಹಿಂದೆ ತಮಗಿರುವ 2 ಎಕರೆ ಅಡಕೆ ತೋಟದಲ್ಲಿ 80-90 ಕೆಜಿ ಏಲಕ್ಕಿ ಬೆಳೆಯುತ್ತಿದ್ದೆವು. ಅಧಿಕ ನಿರ್ವಹಣೆ ವೆಚ್ಚ, ಕಾಡು ಪ್ರಾಣಿಗಳ ಉಪಟಳದಿಂದ ಈಗ 1 ಕೆಜಿ ಕೂಡ ಬೆಳೆಯಲು ಸಾಧ್ಯವಾಗುತ್ತಿಲ್ಲ. ಉಪ ಬೆಳೆಗಳು ಕೈ ಹಿಡಿಯದಿದ್ದರೆ ಬೆಳೆಗಾರರ ಬದುಕು ದುಸ್ತರವಾಗಲಿದೆ. ಅಶೋಕ್ ಹೆಬ್ಬಿಗೆಮಠ, ನಿಟ್ಟೂರು.
from India & World News in Kannada | VK Polls https://ift.tt/3iDsS0h