ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ಹಣವನ್ನು ಹಿಂದೂಯೇತರ ಧಾರ್ಮಿಕ ಕೇಂದ್ರ ಗಳಿಗೆ ನೀಡಬಾರದು ಎಂಬ ಹಿಂದೂಪರ ಸಂಘಟನೆಗಳ ಆಕ್ಷೇಪಗಳ ಬೆನ್ನಲ್ಲೇ 868 ಹಿಂದೂಯೇತರ ಧಾರ್ಮಿಕ ಕೇಂದ್ರ ಗಳಿಗೆ ನೀಡಬೇಕಾಗಿದ್ದ ಹಾಗೂ ವರ್ಷಾಸನವನ್ನು ಧಾರ್ಮಿಕ ದತ್ತಿ ಇಲಾಖೆ ತಡೆ ಹಿಡಿದಿದೆ. ಕಳೆದ ನಾಲ್ಕು ತಿಂಗಳಿಂದ ಸಹಾಯ ಧನ ಪಾವತಿಯಾಗಿಲ್ಲ. ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಹಿಂದೂಯೇತರ ಧಾರ್ಮಿಕ ಕೇಂದ್ರಗಳಿಗೆ ಪ್ರತಿ ತಿಂಗಳಿಗೆ ನಾಲ್ಕು ಸಾವಿರದಂತೆ ವರ್ಷಕ್ಕೆ 48,000 ರೂಪಾಯಿ ತಸ್ತಿಕ್ ನೀಡಲಾಗುತಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಯ ಹಣವನ್ನು ಮಸೀದಿ, ದರ್ಗಾ ಕೇಂದ್ರಗಳಿಗೆ ನೀಡುವುದಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ತಸೀಕ್‌ಗೆ ಬ್ರೇಕ್ ಬಿದ್ದಿದ್ದು 2020- 21 ನೇ ಸಾಲಿನಲ್ಲಿ ಒಟ್ಟು 4,17,31,473 ಕೋಟಿ ತಸ್ತಿಕ್ ಹಣ ಪಾವತಿ ಆಗಿಲ್ಲ. ಹಿಂದೂಯೇತರ 868 ಧಾರ್ಮಿಕ ಕೇಂದ್ರಗಳಿಗೆ ಅಲ್ಪಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯ ಮುಖಾಂತರ ತಸ್ತೀಕ್ ಮತ್ತು ವರ್ಷಾಸನ ಮೊತ್ತವನ್ನು ಮಂಜೂರು ಮಾಡಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆದೇಶಿಸಿದೆ. ಆದರೆ ಅನುದಾನದ ಮೊತ್ತ ಈವರೆಗೆ ಬಿಡುಗಡೆ ಆಗಿಲ್ಲ. ಈ ಬಗ್ಗೆ ವಿಜಯ ಕರ್ನಾಟಕ ವೆಬ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ರಸೂಲ್ ಸಾಬ್ “ ಧಾರ್ಮಿಕ ಕೇಂದ್ರಗಳಿಗೆ ತಸ್ತೀಕ್ ನೀಡುವಂತೆ ಕಳೆದ ಹಲವು ದಿನಗಳಿಂದ ಅಲೆದಾಡುತ್ತಿದ್ದೇವೆ. ಲಾಕ್‌ಡೌನ್ ಕಾರಣದಿಂದ ಧಾರ್ಮಿಕ ಕೇಂದ್ರಗಳು ಸಂಕಷ್ಟದಲ್ಲಿದೆ. ಆದರೆ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಈ ಬಗ್ಗೆ ಕೇಳಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ವಿಚಾರಿಸಿದೆ ಅಷ್ಟೊಂದು ಮೊತ್ತದ ಅನುದಾನ ನಮ್ಮಲ್ಲಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಉತ್ತರಿಸುತ್ತಾರೆ” ಎನ್ನುತ್ತಾರೆ. ಏನಿದು ತಸ್ತೀಕ್? ರಾಜ್ಯದ ದೇವಸ್ಥಾನಗಳು ಹಾಗೂ ಇತರೇ ಧಾರ್ಮಿಕ ಕೇಂದ್ರಗಳು ಹೊಂದಿದ್ದ ಇನಾಂ ಜಮೀನುಗಳಿಗೆ ಕರ್ನಾಟಕ( ಮತೀಯ ಮತ್ತು ಧರ್ಮಾರ್ಥ) ಇನಾಂ ರದ್ದತಿ ಕಾಯ್ದೆ 1955 ಮತ್ತು ಕರ್ನಾಟಕ ಹಲವು ಇನಾಂ ರದ್ದತಿ ಕಾಯ್ದೆ 1977 ರನ್ವರ ಪರಿಹಾರಾತ್ಮಕವಾಗಿ ಧಾರ್ಮಿಕ ಕೇಂದ್ರಗಳಿಗೆ ತಸ್ತೀಕ್ ಭತ್ಯೆಯನ್ನು ನೀಡಲಾಗುತ್ತಿತ್ತು. ಹಿಂದೂ ಹಾಗೂ ಹಿಂದೂಯೇತರ ಧಾರ್ಮಿಕ ಕೇಂದ್ರಗಳಿಗೆ ಧಾರ್ಮಿಕ ದತ್ತಿ ಇಲಾಖೆಯೇ ತಸ್ತೀಕ್ ನೀಡುತ್ತಿತ್ತು. ಆದರೆ ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ತಸ್ತೀಕ್ ನೀಡುತ್ತಿರುವುದಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಈ ಹಿಂದೆ ಮುಜರಾಯಿ ಇಲಾಖೆಯ ಸಚಿವರಾಗಿದ್ದ ಕೋಟಾ ಶ್ರೀನಿವಾಸ್ ಪೂಜಾರಿ ಧಾರ್ಮಿಕ ದತ್ತಿ ಇಲಾಖೆಯ ಹಣವನ್ನು ಕೇವಲ ಹಿಂದೂ ದೇವಾಲಯಗಳಿಗೆ ಮಾತ್ರ ವಿನಿಯೋಗ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.
from India & World News in Kannada | VK Polls https://ift.tt/3nzYkOn