ಮಳೆಯ ಅಬ್ಬರ; ತೈಲ ದರ ಏರಿಕೆಯಿಂದ ಸೊಪ್ಪು, ತರಕಾರಿಗಳ ದರದಲ್ಲಿ ಏರಿಕೆ: ಇಲ್ಲಿದೆ ಬೆಲೆ ವಿವರ!

ಬೆಂಗಳೂರು: ತೈಲ ಬೆಲೆ ಏರಿಕೆ ಪರಿಣಾಮ ಸಾಗಣೆ ವೆಚ್ಚವೂ ಏರಿಕೆಯಾಗಿರುವುದರಿಂದ ಅದರ ಪರಿಣಾಮ ಬೆಲೆ ಗಗನಮುಖಿಯಾಗಿದೆ. ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊತ್ತಂಬರಿ ಸೊಪ್ಪು, ಈರುಳ್ಳಿ, ಟೊಮೇಟೊ ಮತ್ತಿತರ ಕೆಲವು ಸೊಪ್ಪು, ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ಒಂದು ಕಂತೆ ಕೊತ್ತಂಬರಿ ಸೊಪ್ಪಿಗೆ 50 ರೂ. ದರವಿದ್ದರೆ, ಈರುಳ್ಳಿ, ಟೊಮೇಟೊ ಕೂಡ ಇದೇ ದರದಲ್ಲಿವೆ. ಕೆಲವೆಡೆ ಗುಣಮಟ್ಟದ ಆಧಾರದ ಮೇಲೆ ತಲಾ 10-20 ರೂ.ವರೆಗೆ ಏರುಪೇರಾಗುತ್ತದೆ. ಕಳೆದ ವಾರ ಟೊಮೇಟೊ ದರ ಮತ್ತಷ್ಟು ಏರಿಕೆಯಾಗಿತ್ತು. ಇದೀಗ ಸ್ವಲ್ಪ ಇಳಿಕೆಯಾಗಿದ್ದರೂ ಗುಣಮಟ್ಟದ ಹಣ್ಣು ಸಿಗುತ್ತಿಲ್ಲ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸುಮಾರು ಒಂದು ತಿಂಗಳಿಂದ ನಿರಂತರವಾಗಿ ಬೀಳುತ್ತಿರುವುದರ ಪರಿಣಾಮ ನಗರದಲ್ಲಿ ಕೊತ್ತಂಬರಿ ಸೊಪ್ಪು ಹಾಗೂ ಇತರೆ ಸೊಪ್ಪುಗಳು ಮತ್ತು ತರಕಾರಿಗಳ ದರ ಗಗನಕ್ಕೇರಿದೆ. ಆದರೆ ಈ ಬಾರಿ ನಿಂಬೆಹಣ್ಣು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಪ್ರತಿ ಹಣ್ಣು 2-3 ರೂ.ಗೆ ಸಿಗುತ್ತಿದೆ. ನಗರದ ಕಲಾಸಿಪಾಳ್ಯ, ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರ, ಮಡಿವಾಳ, ಯಶವಂತಪುರ ಸೇರಿದಂತೆ ನಾನಾ ಮಾರುಕಟ್ಟೆಗಳಲ್ಲಿ ಕಳೆದ ಒಂದು ತಿಂಗಳಿಂದಲೇ ಸಣ್ಣ ಪ್ರಮಾಣದಲ್ಲಿ ಏರಿಕೆಯಾಗುತ್ತಾ ಬಂದ ಕೊತ್ತಂಬರಿ ಸೊಪ್ಪು, ಈರುಳ್ಳಿ, ಟೊಮೇಟೊ ಮತ್ತಿತರ ತರಕಾರಿಗಳ ದರದಲ್ಲಿ ಇದೀಗ ಮತ್ತಷ್ಟು ಏರಿಕೆಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೊಪ್ಪುಗಳು ತೋಟದಲ್ಲೇ ಕೊಳೆಯಲಾರಂಭಿಸಿವೆ. ಮತ್ತೊಂದೆಡೆ ಸೊಪ್ಪು ಕಿತ್ತು ತಂದರೂ ಮಳೆ ನೀರು ಸೇರಿಕೊಂಡು ಅರ್ಧ ದಿನದಲ್ಲೇ ಕೊಳೆತಂತಾಗಿರುತ್ತದೆ. ಹೀಗಾಗಿ ಗುಣಮಟ್ಟದ ಸೊಪ್ಪೂ ಸಿಗುತ್ತಿಲ್ಲ. ಇರುವ ಸೊಪ್ಪು ಕೂಡ ದುಬಾರಿಯಾಗಿದೆ. ದಸರಾಗೂ ಮೊದಲು ಒಂದು ಕಂತೆ ಕೊತ್ತಂಬರಿ ಸೊಪ್ಪಿಗೆ 15-20 ರೂ. ಇತ್ತು. ಇದೀಗ ಕೊತ್ತಂಬರಿ ಸೊಪ್ಪಿನ ಬೆಲೆ 50 ರೂ.ಗೆ ಏರಿಕೆಯಾಗಿದೆ. ನಾಟಿ ಕೊತ್ತಂಬರಿಗೆ ಹೆಚ್ಚು ಬೇಡಿಕೆಯಿದೆ. ಆದರೆ ಪೂರೈಕೆಯಿಲ್ಲ. ''ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಆದ್ದರಿಂದ ಮಾರುಕಟ್ಟೆಗೆ ಸೊಪ್ಪಿನ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಬೆಲೆಗಳು ಏರಿಕೆಯಾಗುತ್ತಿವೆ. ದೀಪಾವಳಿ ಹಬ್ಬದ ವೇಳೆಗೆ ಮತ್ತಷ್ಟು ಬೇಡಿಕೆ ಬರಲಿದ್ದು, ಬೆಲೆಗಳು ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ'' ಎನ್ನುತ್ತಾರೆ ತರಕಾರಿ ಚಿಲ್ಲರೆ ಮಾರಾಟಗಾರರಾದ ಚಂದ್ರಮ್ಮ. ಕೇವಲ ಕೊತ್ತಂಬರಿ ಸೊಪ್ಪಿನ ಬೆಲೆ ಮಾತ್ರ ಏರಿಕೆಯಾಗಿಲ್ಲ. ಪಾಲಕ್‌, ದಂಟು, ಮೆಂತ್ಯ, ಸಬ್ಬಕ್ಕಿ ಮುಂತಾದ ಸೊಪ್ಪುಗಳ ಬೆಲೆ ಕೂಡ ಏರಿಕೆಯಾಗಿದೆ. ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಟೊಮೆಟೋ ಸೇರಿದಂತೆ ನಾನಾ ಬೆಳೆಗಳಿಗೆ ಹಾನಿಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಈರುಳ್ಳಿ, ಮೆಣಸಿನಕಾಯಿ ಕಟಾವು ಮಾಡಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದುರ್ಗದ ನಾನಾ ಭಾಗಗಳಲ್ಲಿ ಕಳೆದ ತಿಂಗಳು ತರಕಾರಿ ಬೆಳೆಗಳು ನೀರಿಲ್ಲದೇ ಒಣಗುತ್ತಿದ್ದವು. ಈ ತಿಂಗಳು ಮಳೆಯಿಂದಾಗಿ ಹೊಲದಲ್ಲಿಯೇ ತರಕಾರಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಗದಗ, ಕೊಪ್ಪಳ, ರಾಯಚೂರು ಮತ್ತಿತರ ಭಾಗಗಳಲ್ಲಿ ಹಾಗೂ ಅತಿ ಹೆಚ್ಚು ಈರುಳ್ಳಿ ಸರಬರಾಜಾಗುವ ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದೆ. ಜತೆಗೆ ಸಾಕಷ್ಟು ಪ್ರಮಾಣದ ಈರುಳ್ಳಿ ಮೇಲ್ಭಾಗದಲ್ಲಿ ಉತ್ತಮವಾಗಿ ಕಂಡರೂ, ಒಳಭಾಗ ಕೊಳೆತಿರುವುದರಿಂದ ಬಳಕೆಗೆ ಯೋಗ್ಯವಲ್ಲದಂತಾಗಿದೆ. ಜತೆಗೆ ತೈಲ ಬೆಲೆ ಏರಿಕೆಯಿಂದಾಗಿ ಸಗಟು ಸಾಗಣೆ ದರವೂ ಹೆಚ್ಚಾಗಿದೆ. ಹೀಗಾಗಿ, ಈರುಳ್ಳಿ ಬೆಲೆ ಏರಿಕೆಯಾಗಿದೆ. ಹಬ್ಬದ ವೇಳೆಗೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಯಶವಂತಪುರ ಎಪಿಎಂಸಿಯ ಈರುಳ್ಳಿ ವರ್ತಕರಾದ ಚಂದ್ರು. ಚಿಲ್ಲರೆ ದರ (ಕೆ.ಜಿ.ಗಳಲ್ಲಿ)
  • ಬೀನ್ಸ್‌ 60 ರೂ.
  • ಟೊಮೇಟೊ 40 ರೂ.
  • ಮೂಲಂಗಿ 60 ರೂ.
  • ಕುಂಬಳಕಾಯಿ 20 ರೂ.
  • ಡಬ್ಬಲ್‌ ಬೀನ್ಸ್‌ 80 ರೂ.
  • ಕೊತ್ತಂಬರಿ ಸೊಪ್ಪು
  • ಕಿತ್ತಳೆಹಣ್ಣು 40-50 ರೂ.
  • ಏಲಕ್ಕಿ ಬಾಳೆ 60 ರೂ.
  • ನಿಂಬೆಹಣ್ಣು ಒಂದಕ್ಕೆ 2-3 ರೂ.


from India & World News in Kannada | VK Polls https://ift.tt/3w1eLYd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...