ಬೆಂಗಳೂರು: ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಅಡುಗೆ ಎಣ್ಣೆಗಳ ದರ ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ ಲೀಟರ್ಗೆ 10 ರೂ.ನಿಂದ 20 ರೂ.ವರೆಗೂ ಇಳಿಕೆಯಾಗಿದೆ. ದೀಪಾವಳಿ ಹಬ್ಬದ ವೇಳೆಗೆ ಮತ್ತೆ 5 ರೂಪಾಯಿ ಕಡಿಮೆಯಾಗುವ ನಿರೀಕ್ಷೆ ಇದೆ. ಕಳೆದ ಎರಡು ವರ್ಷಗಳಿಂದ ಏರುಗತಿಯಲ್ಲೇ ಸಾಗುತ್ತಿದ್ದ ಸಿಕ್ಕಾಪಟ್ಟೆ ದುಬಾರಿಯಾಗಿತ್ತು. ದರ ನಿಯಂತ್ರಿಸದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶವೂ ವ್ಯಕ್ತವಾಗಿತ್ತು. ಒತ್ತಡಕ್ಕೆ ಮಣಿದ ಕೇಂದ್ರ ಸರಕಾರ ಅಡುಗೆ ಎಣ್ಣೆ ಮೇಲಿನ ಆಮದು ಸುಂಕ 10 ರೂ. ವರೆಗೆ ಇಳಿಕೆ ಮಾಡಿದ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಗರಿಷ್ಠ 20 ರೂ. ವರೆಗೂ ಇಳಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲ ಅಗತ್ಯ ವಸ್ತುಗಳ ದರ ಏರಿಕೆಯಾಗಿರುವ ಹೊತ್ತಿನಲ್ಲಿ ಅಡುಗೆ ಎಣ್ಣೆ ದರ ಇಳಿಕೆಯಾಗಿರುವುದು ಆಚರಣೆ ಸಿದ್ಧತೆಯಲ್ಲಿರುವ ಜನರಲ್ಲಿ ತುಸು ಸಮಾಧಾನ ತರಲಿದೆ. ಎರಡು ವರ್ಷಗಳ ಹಿಂದೆ ಅಡುಗೆ ಎಣ್ಣೆ ದರ ಲೀಟರ್ಗೆ 95 ರೂ. ಇತ್ತು. ಕ್ರಮೇಣ ಏರಿಕೆಯಾಗಿ 170 ರೂಪಾಯಿವರೆಗೂ ತಲುಪಿತ್ತು. ಎಷ್ಟೆಷ್ಟು ಇಳಿಕೆ?ಸಾಮಾನ್ಯ ಬ್ರ್ಯಾಂಡಿನ ಸೂರ್ಯಕಾಂತಿ ಎಣ್ಣೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ಗೆ 170 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಇದೇ ಬ್ರ್ಯಾಂಡಿನ ಅಡುಗೆ ಎಣ್ಣೆ ಈಗ 150 ರೂಪಾಯಿಗೆ ಇಳಿದಿದೆ. ಹಾಗೆಯೇ ಪಾಮ್ ಆಯಿಲ್ ದರ ಲೀಟರ್ಗೆ 136 ರೂ.ನಿಂದ 123 ರೂ.ಗೆ ಕುಸಿದಿದೆ. ಇನ್ನು ಸೋಯಾ ಹಾಗೂ ರೈಸ್ ಬ್ರಾಯಿನ್ ಅಡುಗೆ ಎಣ್ಣೆ ದರದಲ್ಲಿ ಪ್ರತಿ ಲೀಟರ್ಗೆ 10 ರೂ.ವರೆಗೆ ಇಳಿಕೆ ಕಂಡಿದೆ ಎಂದು ಬೆಂಗಳೂರಿನ ತರಗು ಪೇಟೆಯ ಸಗಟು ವ್ಯಾಪಾರಿ ಮನೋಹರ್ ಮಾಹಿತಿ ನೀಡಿದರು. ಜಾರಿಗೆ ಬಂದಿರಲಿಲ್ಲಕಳೆದ ಒಂದು ತಿಂಗಳ ಹಿಂದೆಯೇ ಕೇಂದ್ರ ಸರಕಾರ ಆಮದು ಸುಂಕ ಇಳಿಕೆ ಮಾಡಿತ್ತಾದರೂ ಮಾರುಕಟ್ಟೆಯಲ್ಲಿ ಇನ್ನೂ ಜಾರಿಗೆ ಬಂದಿರಲಿಲ್ಲ. ಈಗ ಎಲ್ಲೆಡೆ ಅಡುಗೆ ಎಣ್ಣೆ ದರ ಇಳಿಕೆಯಾಗಿದೆ. ಮುಂದಿನ ವಾರದೊಳಗೆ ಮತ್ತಷ್ಟು ಇಳಿಕೆಯಾಗಬಹುದು ಎಂದು ಅಡುಗೆ ಎಣ್ಣೆ ಡೀಲರ್ಗಳು ಅಂದಾಜಿಸಿದ್ದಾರೆ.
from India & World News in Kannada | VK Polls https://ift.tt/3bj3Wqz