ಬೆಂಗಳೂರು: ಉಪ ಚುನಾವಣೆ ಪ್ರಚಾರದ ಅಬ್ಬರಕ್ಕೆ ತೆರೆ ಬೀಳುತ್ತಿದ್ದಂತೆ, ಬಿಟ್ ಕಾಯಿನ್ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ. ಇದರ ಬೆನ್ನಿಗೇ ಪ್ರತಿಕ್ರಿಯಿಸಿರುವ ಸಿಎಂ ಅವರು, ಪ್ರಕರಣದ ಸಂಬಂಧ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಈಗಾಗಲೇ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಬಿಟ್ ಕಾಯಿನ್ ಅವ್ಯವಹಾರದಲ್ಲಿ ಪ್ರಭಾವಿ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಉಪ ಚುನಾವಣೆ ಪ್ರಚಾರದ ಕಡೆಯ ದಿನ ಬಿಟ್ ಕಾಯಿನ್ ದಂಧೆ ಬಗ್ಗೆ ಪ್ರತಿಪಕ್ಷದ ನಾಯಕ ಪ್ರಸ್ತಾಪಿಸಿದ್ದರು. ಬಳಿಕ ಇದೇ ವಿಚಾರವಾಗಿ ಟ್ವೀಟ್ ಮಾಡಿದ್ದ ಅವರು, ಈ ಪ್ರಕರಣವನ್ನೇ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ಆರೋಪಿಸಿದ್ದರು. ಅದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಸುದ್ದಿಯೊಂದು ಮುನ್ನೆಲೆಗೆ ಬರುವಂತಾಗಿತ್ತು. ಇಡಿ, ಸಿಬಿಐ ಸುಪರ್ದಿಗೆಈ ಬಗ್ಗೆ ಹುಬ್ಬಳ್ಳಿಯಲ್ಲಿ ಗುರುವಾರ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ‘ಈ ಬಗ್ಗೆ ರಾಜ್ಯ ಮಟ್ಟದಲ್ಲಿ ತನಿಖೆ ಪೂರ್ಣಗೊಂಡಿದೆ. ಬಳಿಕ ಈ ಪ್ರಕರಣವನ್ನು ಇಡಿ ಮತ್ತು ಸಿಬಿಐಗೆ ನಾವೇ ಶಿಫಾರಸು ಮಾಡಿದ್ದೇವೆ. ತನಿಖೆ ಮುಂದುವರಿಯುತ್ತದೆ. ಇದರಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಲು, ಪ್ರಭಾವ ಬೀರಲು ಅವಕಾಶವಿಲ್ಲ. ಪ್ರಕರಣದಲ್ಲಿ ಯಾರದ್ದಾದರೂ ಪಾತ್ರವಿದ್ದರೆ ತಿಳಿಸಲಿ. ಅದರ ಬಗ್ಗೆಯೂ ತನಿಖೆ ಮಾಡಲಾಗುವುದು’ ಎಂದು ಹೇಳಿದ್ದಾರೆ. ಈ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕರಣ ಸಂಬಂಧ ಸಿಐಡಿ ವಿಶೇಷ ತಂಡ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯವರ ಪೂರ್ವ ನಿಯೋಜಿತ ಕಾರ್ಯ ಕಲಾಪದಂತೆ ಗುರುವಾರ ಮಧ್ಯಾಹ್ನವೇ ಅವರು ಬೆಂಗಳೂರಿಗೆ ಆಗಮಿಸಿ ಮಹತ್ವದ ಸಭೆಗಳಲ್ಲಿ ಭಾಗವಹಿಸಬೇಕಿತ್ತು. ಆದರೆ, ಬೆಂಗಳೂರಿನ ಸಭೆಗಳನ್ನು ರದ್ದುಪಡಿಸಿದ ಅವರು ಹುಬ್ಬಳ್ಳಿಯಲ್ಲಿ ಉಳಿದುಕೊಂಡದ್ದು ಗಮನ ಸೆಳೆಯಿತು. ಹುಬ್ಬಳ್ಳಿಯಲ್ಲೇ ಅವರು ಕನ್ನಡಕ್ಕಾಗಿ ನಾವು ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಮುಚ್ಚಿ ಹಾಕುವ ಆರೋಪಬಿಟ್ ಕಾಯಿನ್ ದಂಧೆಯಲ್ಲಿ ದೊಡ್ಡ ಅವ್ಯವಹಾರ ನಡೆದಿದೆ. ಅದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಯತ್ನ ನಡೆಸಲಾಗುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಪ್ರಕರಣದ ತನಿಖೆಯನ್ನು ಇಡಿ, ಸಿಬಿಐಗೆ ನೀಡಿದ್ದು ಹೌದಾದರೆ ಈ ಸಂಗತಿಯನ್ನು ಏಕೆ ಬಹಿರಂಗಗೊಳಿಸಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇನ್ನು ಸಿಎಂ ಹೇಳಿಕೆ ಹುಬ್ಬಳ್ಳಿಯಲ್ಲೇ ಇದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿ, ‘ಈ ಪ್ರಕರಣದಲ್ಲಿ 10 ಸಾವಿರ ಕೋಟಿ ರೂ. ವಹಿವಾಟಿನ ಗುಮಾನಿಯಿದೆ. ಇದರ ಸತ್ಯಾಂಶ ಹೊರಬಂದರೆ ಹಲವು ನಾಯಕರ ಕುರ್ಚಿ ಅಲುಗಾಡಲಿದೆ. ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಯೇ ಸೂಕ್ತ. ಇತರ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಹೊರಟು ಹೋಗಿದೆ’ ಎಂದು ಹೇಳಿದ್ದಾರೆ.
from India & World News in Kannada | VK Polls https://ift.tt/3CqmBwN