ಹೊಸದಿಲ್ಲಿ: ಬೆನ್ನು ನೋವಿನಿಂದಾಗಿ ಬಾಂಗ್ಲಾದೇಶ ವೇಗಿ ಮೊಹಮ್ಮದ್ ಸೈಫುದ್ದೀನ್ ಪ್ರಸ್ತುತ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಆ ಮೂಲಕ ಶ್ರೀಲಂಕಾ ವಿರುದ್ಧ ತನ್ನ ಆರಂಭಿಕ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಬಾಂಗ್ಲಾದೇಶಕ್ಕೆ ಇದೀಗ ಮತ್ತೊಂದು ಆಘಾತವಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ , ತನ್ನ ಬೆನ್ನಿನ ಎಡ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದರು ಎಂದು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ 15 ಆಟಗಾರರ ಬಾಂಗ್ಲಾದೇಶ ತಂಡದಲ್ಲಿ 24ರ ಪ್ರಾಯದ ಯುವ ವೇಗಿಯ ಸ್ಥಾನವನ್ನು ಹಿರಿಯ ವೇಗಿ ತುಂಬಲಿದ್ದಾರೆ. "ಮೊಹಮ್ಮದ್ ಸೈಫುದ್ದೀನ್ ಬಾಂಗ್ಲಾದೇಶಕ್ಕೆ ಮರಳಿದ ಬಳಿಕ ಅವರ ಗಾಯದ ಗಂಭೀರತೆಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ ಅವರು ಟೂರ್ನಿಯಲ್ಲಿ ಪುನರಾಗಮನ ಮಾಡಲು ಸಾಧ್ಯವಾಗದ ಕಾರಣ ನಾವು ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಂಡಿದ್ದೇವೆ," ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹಿರಿಯ ಮಾಧ್ಯಮ ಮತ್ತು ಸಂವಹನ ವ್ಯವಾಸ್ಥಾಪಕ ರಬೀದ್ ಇಮಾಮ್ ಕ್ರಿಕ್‌ಬಝ್‌ಗೆ ಬುಧವಾರ ತಿಳಿಸಿದ್ದಾರೆ. ಅಂದಹಾಗೆ ಮುಹಮ್ಮದ್ ಸೈಫುದ್ದೀನ್ 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಇದೇ ಸಮಸ್ಯೆಯನ್ನು ಎದುರಿಸಿದ್ದರು. ಆದರೆ, ಕಾರ್ಟಿಸೋನ್ ಇಂಜೆಕ್ಷನ್ ಪಡೆಯುವ ಮೂಲಕ ಟೂರ್ನಿಯಲ್ಲಿ ಮುಂದುವರಿದಿದ್ದರು. ಇದರ ಹೊರತಾಗಿಯೂ ಹಲವು ಪಂದ್ಯಗಳಲ್ಲಿ ಅವರು ಆಡಿರಲಿಲ್ಲ. ಇದರಿಂದ ಅವರು ಟೀಕೆಗೆ ಗುರಿಯಾಗಿದ್ದರು. ವೇಗಿ ಸೈಫುದ್ದೀನ್ ಅವರ ಸ್ಥಾನಕ್ಕೆ ಬಾಂಗ್ಲಾದೇಶ ತಂಡದಲ್ಲಿ ರುಬೆಲ್ ಹುಸೇನ್‌ಗೆ ಅವಕಾಶ ಮಾಡಿಕೊಳ್ಳಲು ಐಸಿಸಿ ಪುರುಷರ ಟಿ20 ವಿಶ್ವಕಪ್-2021 ತಾಂತ್ರಿಕ ಸಮಿತಿ ಒಪ್ಪಿಗೆ ನೀಡಿದೆ. ಅಂದಹಾಗೆ ರೆಬೆಲ್ ಬಾಂಗ್ಲಾದೇಶದ ಪರ 28 ಟಿ20 ಪಂದ್ಯಗಳು ಸೇರಿದಂತೆ ಒಟ್ಟು 159 ಅಂತಾರಾಷ್ಟ್ರೀಯ ಪಂದ್ಯಗಳಾಡಿರುವ ಅನುಭವನ್ನು ಹೊಂದಿದ್ದಾರೆ. ಅರ್ಹತಾ ಸುತ್ತಿನ ಮೂರು ಪಂದ್ಯಗಳಲ್ಲಿ ಮೊಹಮ್ಮದ್ ಸೈಫುದ್ದೀನ್ ನಾಲ್ಕು ವಿಕೆಟ್ ಕಬಳಿಸಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು 38 ರನ್ ನೀಡಿ ಕೇವಲ ಒಂದೇ ಒಂದು ವಿಕೆಟ್ ಪಡೆದಿದ್ದರು. ಲಾಹಿರು ಕುಮಾರ, ಲಿಟನ್ ದಾಸ್‌ಗೆ ದಂಡ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಆಕ್ರಮಣಕಾರಿ ವರ್ತನೆ ತೋರಿ ಐಸಿಸಿ ನಿಯಮ ಉಲ್ಲಂಘಿಸಿದ ಶ್ರೀಲಂಕಾ ತಂಡದ ವೇಗಿ ಲಾಹಿರು ಕುಮಾರ ಹಾಗೂ ಬಾಂಗ್ಲಾದೇಶ ತಂಡದ ಬ್ಯಾಟ್ಸ್‌ಮನ್ ಲಿಟನ್ ದಾಸ್ ಅವರಿಗೆ ಕ್ರಮವಾಗಿ ಪಂದ್ಯದ ಸಂಭಾವನೆಯಲ್ಲಿ ಶೇ. 25 ಮತ್ತು ಶೇ. 15 ರಷ್ಟು ದಂಡ ವಿಧಿಸಲಾಗಿದೆ. ಕಳೆದ ಭಾನುವಾರ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಈ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಹಾಗೂ ಇಬ್ಬರೂ ಕೈ-ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದ್ದರು. ಈ ವೇಳೆ ಅಂಪೈರ್ ಹಾಗೂ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. "ಆಟಗಾರರು, ಸಹಾಯಕ ಸಿಬ್ಬಂದಿ ಸಂಬಂಧಿತ ಐಸಿಸಿ ಮೊದಲನೇ ಹಂತದ ನಿಯಮ ಉಲ್ಲಂಘಿಸಿದ ಕಾರಣ ಶ್ರೀಲಂಕಾ ಬೌಲರ್ ಲಾಹಿರು ಕುಮಾರ ಮತ್ತು ಬಾಂಗ್ಲಾದೇಶ ಬ್ಯಾಟ್ಸ್‌ಮನ್ ಲಿಟನ್ ದಾಸ್ ಅವರಿಗೆ ದಂಡ ವಿಧಿಸಲಾಗಿದೆ," ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3pGiTf1