: ಕೋವಿಡ್ ಸಾಂಕ್ರಾಮಿಕ ಹಾವಳಿಯಿಂದ ದೊಡ್ಡವರ ಆರೋಗ್ಯ ಹದಗೆಟ್ಟಿರುವುದಷ್ಟೇ ಅಲ್ಲ, ಮಕ್ಕಳ ಮಾನಸಿಕ ಸ್ಥಿತಿಯೂ ಅಲ್ಲೋಲ ಕಲ್ಲೋಲಗೊಂಡಿರುವುದು ಸಾಬೀತಾಗಿದೆ. ದೇಶದಲ್ಲಿ 2020ನೇ ಸಾಲಿನಲ್ಲಿ ಪ್ರತಿನಿತ್ಯ ಸರಾಸರಿ 31 ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಸರಕಾರದ ಅಂಕಿ - ಅಂಶಗಳೇ ಹೇಳಿವೆ..! ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ವರದಿ ಪ್ರಕಾರ, ಕಳೆದ ವರ್ಷ ದೇಶದಲ್ಲಿ 11,396 ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಮಾಣವು 2019ಕ್ಕೆ ಹೋಲಿಸಿದರೆ ಶೇ.18ರಷ್ಟು ಹಾಗೂ 2018ಕ್ಕೆ ಹೋಲಿಸಿದರೆ ಶೇ.21ರಷ್ಟು ಅಧಿಕ ಎಂದು ವರದಿ ತಿಳಿಸಿದೆ. 18 ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಲು ಕೋವಿಡ್ ಒಂದು ಪ್ರಮುಖ ಕಾರಣ ಎಂದು ಗುರುತಿಸಿದ್ದರೂ ಕೌಟುಂಬಿಕ ಸಮಸ್ಯೆಗಳು ಮತ್ತು ಪ್ರೇಮ ವೈಫಲ್ಯದಂತಹ ಕಾರಣಗಳೂ ಸೇರಿವೆ. ಸೈದ್ಧಾಂತಿ ಸಂಘರ್ಷ, ವ್ಯಕ್ತಿ ಪೂಜೆ, ನಿರುದ್ಯೋಗ, ಪಾಲಕರ ಆರ್ಥಿಕ ಸಂಕಷ್ಟದಂತಹ ಹಲವು ಕಾರಣಗಳು ಕೂಡ ಮಕ್ಕಳ ಆತ್ಮಹತ್ಯೆಯಲ್ಲಿ ಪ್ರಧಾನ ಪಾತ್ರ ವಹಿಸಿವೆ. 'ವಿಶೇಷವಾಗಿ ಕೋವಿಡ್ ಕಾರಣ ಮಕ್ಕಳು ಶಾಲೆಯಿಂದ ದೂರ ಉಳಿದರು. ಇದು ಅವರು ಮತ್ತು ಅವರ ಪೋಷಕರಲ್ಲಿ ಚಿತ್ರ ವಿಚಿತ್ರವಾದ ಮಾನಸಿಕ ಸಮಸ್ಯೆಗಳನ್ನು ಹುಟ್ಟು ಹಾಕಿತು. ಮನೆಯಲ್ಲಿದ್ದು ಒಂಟಿತನ ಮತ್ತು ಖಿನ್ನತೆಯಿಂದ ಬಳಲಿದ ಮಕ್ಕಳು ಆತ್ಮಹತ್ಯೆಯನ್ನು ಸುಲಭದ ಪರಿಹಾರವನ್ನಾಗಿ ಆಯ್ಕೆ ಮಾಡಿಕೊಂಡರು' ಎಂದು ಮಕ್ಕಳ ಸಂರಕ್ಷಣಾ ಸಂಸ್ಥೆಯ ಉಪ ನಿರ್ದೇಶಕ ಪ್ರಭಾತ್ ಕುಮಾರ್ ವಿಶ್ಲೇಷಿಸಿದ್ದಾರೆ. 2020ರ ಸಾಲಿನ ಮಕ್ಕಳ ಆತ್ಮಹತ್ಯೆ: ಒಂದಿಷ್ಟು ಅಂಕಿಅಂಶಗಳು.. * ಒಂದು ವರ್ಷದಲ್ಲಿ ಮಾಡಿಕೊಂಡ ಒಟ್ಟು ಮಕ್ಕಳು - 11,396 * ಆತ್ಮಹತ್ಯೆ ಮಾಡಿಕೊಂಡ ಬಾಲಕರು - 5,392 * ಆತ್ಮಹತ್ಯೆಗೆ ಶರಣಾದ ಬಾಲಕಿಯರು - 6,004 ಕಠಿಣ ನಿರ್ಧಾರಕ್ಕೆ ಪ್ರಧಾನ ಕಾರಣಗಳು * ಕೌಟುಂಬಿಕ ಸಮಸ್ಯೆ (4,006) * ಪ್ರೇಮ ವೈಫಲ್ಯ (1,327) * ಅನಾರೋಗ್ಯ (1,327) 'ಶಾಲೆ ಇಲ್ಲದ್ದರಿಂದ ಮಕ್ಕಳು ಮನೆಯಲ್ಲಿಯೇ ಉಳಿದು ಒತ್ತಡ ಅನುಭವಿಸಿದರು. ಸ್ನೇಹಿತರ ಜತೆಗಿನ ಒಡನಾಟವಿಲ್ಲದೇ ಖಿನ್ನತೆಗೆ ತುತ್ತಾದರು. ಪೋಷಕರ ಕಿರಿ ಕಿರಿ, ಪಠ್ಯ ಕ್ರಮದ ಗೊಂದಲ ಅವರನ್ನು ವಿಪರೀತ ಆತಂಕಕ್ಕೆ ದೂಡಿತ್ತು. ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ಇವು ಪ್ರಮುಖ ಕಾರಣವಾದವು' ಎನ್ನುತ್ತಾರೆ, ಕ್ರೈಂ - ಮಕ್ಕಳ ಹಕ್ಕುಗಳ ಸಂಸ್ಥೆ ನಿರ್ದೇಶಕಿ ಪ್ರೀತಿ ಮಹಾರ.
from India & World News in Kannada | VK Polls https://ift.tt/3nENo2a