ಹೊಸದಿಲ್ಲಿ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ವೈಫಲ್ಯ ಅನುಭವಿಸಲು ಕಾರಣವೇನೆಂಬುದನ್ನು ಪಾಕ್ ಮಾಜಿ ನಾಯಕ ಬಹಿರಂಗಪಡಿಸಿದ್ದಾರೆ. ಅಕ್ಟೋಬರ್ 24ರಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತದ ಪರ ಆರಂಭಿಕರಾದ ಕೆ.ಎಲ್ ರಾಹುಲ್(3) ಹಾಗೂ ರೋಹಿತ್ ಶರ್ಮಾ(0) ವೈಫಲ್ಯ ಅನುಭವಿಸಿದ್ದರು. ಇದು ತಂಡದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಇದರ ಹೊರತಾಗಿಯೂ ವಿರಾಟ್ ಕೊಹ್ಲಿ ಅರ್ಧ ಶತಕ ಹಾಗೂ ರಿಷಭ್ ಪಂತ್(39) ಬ್ಯಾಟಿಂಗ್ ನೆರವಿನಿಂದ ಭಾರತ 151 ರನ್ ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಪಾಕಿಸ್ತಾನ, ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ, ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಭಾರತದ ಬೌಲರ್ಗಳು ವಿಫಲವಾಗಿದ್ದು, ಎಲ್ಲರ ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಲ್ಮಾನ್ ಬಟ್, ಭಾರತ ತಂಡದಲ್ಲಿ ಉತ್ತಮ ಬೌಲರ್ಗಳಿದ್ದಾರೆ. ಆದರೆ, ಅವರು ಆಡುವ ಪರಿಸ್ಥಿತಿಗೆ ಸೂಕ್ತವಾಗುವಂಥ ಬೌಲರ್ಗಳಿಲ್ಲ. ಅದರಲ್ಲೂ ದುಬೈನಂತಹ ಪರಿಸ್ಥಿತಿಗಳಲ್ಲಿ ನೀವು ಆಡಬೇಕೆಂದರೆ, ವೇಗದ ಬೌಲರ್ಗಳು ಹಾಗೂ ಗುಣಮಟ್ಟದ ಸ್ಪಿನ್ನರ್ಗ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ. "ಭಾರತ ತಂಡದಲ್ಲಿ ಉತ್ತಮ ಬೌಲರ್ಗಳಿದ್ದಾರೆ ಆದರೆ, ದುಬೈನಂತಹ ಕಂಡೀಷನ್ನಲ್ಲಿ 140ಕ್ಕೂ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವ ವೇಗಿಗಳು ಬೇಕು. ಆದರೆ, ಇಲ್ಲಿ ಮಧ್ಯಮ ವೇಗಿಗಳು ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ 140ಕ್ಕೂ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವ ವೇಗಿಗಳು ಅಥವಾ ಪರಿಪೂರ್ಣ ಸ್ಪಿನ್ನರ್ಗಳು ತಂಡದಲ್ಲಿ ಇರಬೇಕಾಗುತ್ತದೆ. ಅಂದಹಾಗೆ ಭಾರತದಲ್ಲಿ ಸ್ಪೀಡ್ ಬೌಲರ್ಗಳಿದ್ದಾರೆ. ಆದರೆ, ಅವರನ್ನು ಸದ್ಯ ಆಯ್ಕೆ ಮಾಡಲಾಗಿಲ್ಲ," ಎಂದರು. "ಆಸ್ಟ್ರೇಲಿಯಾ ತಂಡದಲ್ಲಿ ಮೂವರು ಅದ್ಭುತ ವೇಗಿಗಳಿದ್ದಾರೆ. ಅಫ್ಗಾನಿಸ್ತಾನ ತಂಡದಲ್ಲಿ ಮೂವರು ಅತ್ಯುತ್ತಮ ಸ್ಪಿನ್ನರ್ಗಳಿದ್ದಾರೆ. ಭಾರತ ತಂಡದಲ್ಲಿ ಹಾಗೂ ಜಡೇಜಾ ಇದ್ದಾರೆ. ಆದರೆ, ಯುಜ್ವೇಂದ್ರ ಚಹಲ್ ಅವರನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಮತ್ತು ಆರ್ ಅಶ್ವಿನ್ಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಏಕೆ ಬೆಂಚ್ ಕಾಯಿಸಲಾಗಿತ್ತು ಎಂಬ ಬಗ್ಗೆ ವಿವರಿಸಬೇಕಾದ ಅಗತ್ಯವಿದೆ," ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದರು. ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ ಇಲ್ಲವಾದರೆ ಅವರ ಬದಲು ಮುಂದಿನ ಹಣಾಹಣಿಗೆ ಭಾರತ ತಂಡದಲ್ಲಿ ಶಾರ್ದುಲ್ ಠಾಕೂರ್ಗೆ ಅವಕಾಶ ನೀಡಿ ಎಂದು ಸಲ್ಮಾನ್ ಬಟ್ ಇದೇ ವೇಳೆ ಸಲಹೆ ನೀಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಮುಂದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಕೈ ಬಿಡಬಹುದೆ? ಎಂದು ಅಭಿಮಾನಿಯೊಬ್ಬರು ಯೂಟ್ಯೂಬ್ ಚಾನೆಲ್ನಲ್ಲಿ ಸಲ್ಮಾನ್ ಬಟ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಬಟ್, "ಅವರು ಸಂಪೂರ್ಣ ಫಿಟ್ ಇಲ್ಲವೆಂದಾದರೆ ಅವರೊಂದಿಗೆ ಭಾರತ ಕಣಕ್ಕೆ ಇಳಿಯಬೇಕು. ನಿಯಮಿತವಾಗಿ ವಿಕೆಟ್ ಪಡೆಯುವ ಹವ್ಯಾಸವನ್ನು ಶಾರ್ದುಲ್ ಮೈಗೂಡಿಸಿಕೊಂಡಿದ್ದಾರೆ ಹಾಗೂ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ಆಸರೆಯಾಗಬಲ್ಲರು," ಎಂದರು. "ಶಾರ್ದುಲ್ ಠಾಕೂರ್ ಜೊತೆಗೆ ದೀಪಕ್ ಚಹರ್ ತಂಡದಲ್ಲಿದ್ದರೆ ಉತ್ತಮ ಆಯ್ಕೆಯಾಗಲಿದೆ. ಇವರು ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ನೆರವಾಗಲಿದ್ದಾರೆ. ಹಾಗಾಗಿ, ಹಾರ್ದಿಕ್ ಪಾಂಡ್ಯ ಹಾಗೂ ಭುವನೇಶ್ವರ್ ಕುಮಾರ್ ಅವರ ಸ್ಥಾನಕ್ಕೆ ಈ ಇಬ್ಬರಿಗೆ ಅವಕಾಶ ನೀಡಬೇಕೆಂದು," ಎಂದು ಸಲ್ಮಾನ್ ಬಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZnHeel