ಯಶಸ್ವಿಯಾಗಿ ಉಡಾವಣೆಯಾದ ಅಗ್ನಿ-5: ಚೀನಾಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಭಾರತ

ಹೊಸದಿಲ್ಲಿ: ಪೂರ್ವ ಲಡಾಖ್‌ನಲ್ಲಿ ಭಾರತದೊಂದಿಗೆ 17 ತಿಂಗಳಿನಿಂದ ಸೇನಾ ಮುಖಾಮುಖಿ ನಡೆಸುತ್ತಿರುವ ಚೀನಾಕ್ಕೆ ಕಠಿಣ ಯುದ್ಧ ತಂತ್ರದ ಸಂದೇಶವನ್ನು ಭಾರತ ರವಾನಿಸಿದೆ. 5000 ಕಿಲೋ ಮೀಟರ್‌ಗೂ ಅಧಿಕ ದೂರದ ವ್ಯಾಪ್ತಿಯನ್ನು ಕ್ರಮಿಸಬಲ್ಲ, ತನ್ನ ಅಸಾಧಾರಣ ಹಾಗೂ ಬಹು ಶಕ್ತಿಶಾಲಿ ಅಗ್ನಿ-5 ಅನ್ನು ಬುಧವಾರ ಸಂಜೆ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಚೀನಾದ ಉತ್ತರದ ತುದಿಗಳವರೆಗೂ ತಲುಪಬಲ್ಲ ಸಾಮರ್ಥ್ಯ ಹೊಂದಿದೆ. 'ಮೊದಲು ಬಳಕೆ ಮಾಡುವುದಿಲ್ಲ' (ಎನ್‌ಎಫ್‌ಯು) ನೀತಿಗೆ ಬದ್ಧವಾಗಿಯೇ ಈ ಕ್ಷಿಪಣಿಯು ದೇಶದ ಭದ್ರತೆಯ ಸಾಲಿಗೆ ಸೇರ್ಪಡೆಯಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಅಗ್ನಿ-5 (ಐಸಿಬಿಎಂ) ಅನ್ನು ಒಡಿಶಾದ ಕರಾವಳಿಯಲ್ಲಿನ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ರಾತ್ರಿ 7.50ರ ವೇಳೆಗೆ ಉಡಾವಣೆ ಮಾಡಲಾಯಿತು. ಭಾರತದ ಅಣ್ವಸ್ತ್ರ ನಿರೋಧಕ ಹಾಗೂ ಜಲಾಂತರ್ಗಾಮಿ ಆಧಾರಿಯ ಅಣ್ವಸ್ತ್ರ ಕ್ಷಿಪಣಿಗಳಿಗೆ ಈ ಕ್ಷಿಪಣಿ ಭದ್ರ ತಳಹದಿ ಒದಗಿಸಲಿದೆ. 2012ರಲ್ಲಿ ಅಗ್ನಿ-5 ಮೊದಲ ಪರೀಕ್ಷೆ ನಡೆಸಲಾಗಿತ್ತು. 'ಈ ಕ್ಷಿಪಣಿಯು ಮೂರು ಹಂತದ ಘನ ಇಂಧನ ಎಂಜಿನ್‌ಗಳನ್ನು ಹೊಂದಿದೆ. ಅಧಿಕ ಎತ್ತರದ ಕೋನದ ನಿಖರತೆಯೊಂದಿಗೆ 5000 ಕಿ ಮೀ ದೂರದವರೆಗಿನ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಅದನ್ನು ಅದರ ಸಂಪೂರ್ಣ ವ್ಯಾಪ್ತಿಯವರೆಗೂ ಪರೀಕ್ಷಿಸಲಾಗಿದೆ. ಉಡಾವಣೆ ಪರೀಕ್ಷೆ ಚೆನ್ನಾಗಿ ನಡೆದಿದೆ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಪರೀಕ್ಷೆಯು ಎರಡು ಅಂಶಗಳಲ್ಲಿ ಮಹತ್ವದ್ದಾಗಿದೆ. ಸರ್ವಿಸಸ್ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‌ಎಫ್‌ಸಿ) ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾದ ಬಳಿಕ ಇದು ದೇಶದ ಮೊದಲ ಖಂಡಾಂತರ ಕ್ಷಿಪಣಿ (ಐಸಿಬಿಎಂ) ಉಡಾವಣೆಯ ಬಳಕೆಯಾಗಿದೆ. ಎರಡನೆಯ ಅಂಶವೆಂದರೆ, ಈ ಮುಂದೆ ಏಳು ಬಾರಿ ಪರೀಕ್ಷೆಯಾಗಿದ್ದ ಕ್ಷಿಪಣಿಯೊಂದನ್ನು ರಾತ್ರಿ ವೇಳೆ ಮೊದಲ ಬಾರಿ ಉಡಾವಣೆ ಮಾಡಿರುವುದು. ಅಗ್ನಿ-1 ರಿಂದ 5ರ ಸರಣಿವರೆಗಿನ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಪ್ರಸ್ತುತ ಅಗ್ನಿ-5 ಒಂದನ್ನು ಹೊರತುಪಡಿಸಿ ಉಳಿದ ಕ್ಷಿಪಣಿಗಳು ಭಾರತದ ಸಶಸ್ತ್ರ ಖಜಾನೆಯಲ್ಲಿವೆ. ಅಗ್ನಿ-1 ಕ್ಷಿಪಣಿಯು 700 ಕಿಮೀ ವ್ಯಾಪ್ತಿಯದ್ದಾಗಿದ್ದರೆ, ಅಗ್ನಿ-2 ಕ್ಷಿಪಣಿ 2,000 ಕಿಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಅಗ್ನಿ-3 ಮತ್ತು ಅಗ್ನಿ-4 ಕ್ಷಿಪಣಿಗಳು 2,500 ರಿಂದ 3,500 ಕಿಮೀವರೆಗಿನ ಗುರಿ ತಲುಪಬಲ್ಲವು.


from India & World News in Kannada | VK Polls https://ift.tt/31bcfmH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...