ಹೊಸದಿಲ್ಲಿ: ಪಾಕಿಸ್ತಾನ ವಿರುದ್ಧ ತನ್ನ ಆರಂಭಿಕ ಪಂದ್ಯದಲ್ಲಿ 10 ವಿಕೆಟ್ಗಳಿಂದ ಸೋತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧದ ಮುಂದಿನ ಹಣಾಹಣಿಗೆ ಹಿರಿಯ ಆಫ್ ಸ್ಪಿನ್ನರ್ ಮಹತ್ವದ ಸಲಹೆ ನೀಡಿದ್ದಾರೆ. ಅಕ್ಟೋಬರ್ 24ರಂದು ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತದ ಪರ ಆರಂಭಿಕರಾದ ಕೆ.ಎಲ್ ರಾಹುಲ್(3) ಹಾಗೂ ರೋಹಿತ್ ಶರ್ಮಾ(0) ವೈಫಲ್ಯ ಅನುಭವಿಸಿದ್ದರು. ಇದು ತಂಡದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಇದರ ಹೊರತಾಗಿಯೂ ವಿರಾಟ್ ಕೊಹ್ಲಿ ಅರ್ಧ ಶತಕ ಹಾಗೂ ರಿಷಭ್ ಪಂತ್(39) ಬ್ಯಾಟಿಂಗ್ ನೆರವಿನಿಂದ ಭಾರತ 151 ರನ್ ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಪಾಕಿಸ್ತಾನ, ವಿಕೆಟ್ ನಷ್ಟವಿಲ್ಲದೆ 152 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ, ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಭಾರತ ವೈಫಲ್ಯ ಅನುಭವಿಸಿದ್ದು ಎಲ್ಲರ ಬೇಸರಕ್ಕೆ ಕಾರಣವಾಗಿತ್ತು. ಅಕ್ಟೋಬರ್ 31 ರಂದು ದುಬೈ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುವ ತನ್ನ ಎರಡನೇ ಪಂದ್ಯಕ್ಕೆ ಭಾರತ ಸಜ್ಜಾಗುತ್ತಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಹಾಗೂ ಕೆ.ಎಲ್ ರಾಹುಲ್ ಆರಂಭಿಕ ಜೋಡಿಯನ್ನು ಬದಲಾಯಿಸುವಂತೆ ಹರಭಜನ್ ಸಿಂಗ್ ಸಲಹೆ ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಹರಭಜನ್ ಸಿಂಗ್, "ನನ್ನ ಪ್ರಕಾರ ಅವರನ್ನು ಪ್ಲೇಯಿಂಗ್ ಇಲೆವೆನ್ಗೆ ಕರೆ ತರುವ ಅಗತ್ಯವಿದೆ. ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಿದ್ದೇ ಆದಲ್ಲಿ, ಟೀಮ್ ಇಂಡಿಯಾ ನಿರೀಕ್ಷಿಸುತ್ತಿರುವ ಆರಂಭ ಖಂಡಿತಾ ಸಿಗಲಿದೆ," ಎಂದು ಹೇಳಿದರು. "ಕಿಶನ್ ಸ್ಪೋಟಕ ಬ್ಯಾಟ್ಸ್ಮನ್ ಆಗಿದ್ದು, ಯಾವುದೇ ಬೌಲರ್ ಮೇಲೆ ಒತ್ತಡ ಹೇರಬಲ್ಲರು. ಅಲ್ಲದೆ, ಅವರು ಸದ್ಯ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಂತಿಮ ಹಂತದಲ್ಲಿ ಮುಂಬೈ ಇಂಡಿಯನ್ಸ್ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಇದರ ಜೊತೆಗೆ ಅಭ್ಯಾಸ ಪಂದ್ಯಗಳಲ್ಲಿಯೂ ಅದ್ಭುತವಾಗಿ ಕಂಡಿದ್ದರು," ಎಂದು ಹರಭಜನ್ ಸಿಂಗ್ ತಿಳಿಸಿದರು. ಇತ್ತೀಚೆಗೆ ಮುಕ್ತಾಯವಾಗಿದ್ದ 2021ರ ಐಪಿಎಲ್ ಟೂರ್ನಿಯ ಯುಎಇ ಲೆಗ್ನಲ್ಲಿ ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಟೂರ್ನಿಯ ಮೊದಲನೇ ಅಭ್ಯಾಸ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸೂಪರ್ 12ರ ಹಂತದ ಎರಡನೇ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ತಮ್ಮ ಆರಂಭಿಕ ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿವೆ. ಈ ಹಿನ್ನೆಲೆಯಲ್ಲಿ ಭಾನುವಾರದ ಪಂದ್ಯ ಈ ಎರಡೂ ತಂಡಗಳಿಗೆ ಅತ್ಯಂತ ಮುಖ್ಯವಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3by5Nbv